
ಬೆಳಗಾವಿ: ರಸ್ತೆ ಅಪಘಾತದಲ್ಲಿ ಯರಗಟ್ಟಿ ಪಟ್ಟಣದ ದುಡವಾಡ ಠಾಣೆ ಎಎಸ್ಐ ಮೃತಪಟ್ಟಿದ್ದು, ಪ್ರಕರಣದಲ್ಲಿ ಪಿಎಸ್ಐ ಓರ್ವರನ್ನು ಅಮಾನತುಗೊಳಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೈಕ್ ಅಪಘಾತದಲ್ಲಿ ಎಎಸ್ಐ ವಿಜಯಕಾಂತ ಮಿಕಲಿ (51) ಮೃತಪಟ್ಟಿದ್ದರು. ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದ್ದೇ ಅಪಘಾತದಲ್ಲಿ ಬಲಿಯಾಗಲು ಕಾರಣ ಎಂದು ಹೇಳಲಾಗುತ್ತಿದೆ.
ಬೆಳಗಾವಿ ಎಸ್ ಪಿ ಡಾ.ಭೀಮಾಶಂಕರ್ ಗುಳೇದ್ ಎಲ್ಲಾ ಪೊಲೀಸರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಆದೇಶ ಹೊರಡಿಸಿದ್ದರು. ಆದರೆ ಎ ಎಸ್ ಐ ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದ್ದು, ಕರ್ತವ್ಯ ನಿರತರಾಗಿದ್ದಾಗಲೇ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಮೇಲಧಿಕಾರಿಗಳ ನಿರ್ದೇಶನವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದೇ ನಿರ್ಲಕ್ಷ್ಯ ಆರೋಪದಲ್ಲಿ ದೊಡವಾಡ ಠಾಣೆ ಪಿಎಸ್ ಐ ನಂದೀಶ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.