ಕೋಲಾರ: ಮಾಜಿ ಸಚಿವ ಆರ್.ಎಲ್. ಜಾಲಪ್ಪ ನಿಧನದ ನಂತರ ದೇವರಾಜ ಅರಸು ಶಿಕ್ಷಣ ಟ್ರಸ್ಟ್ ಅಧ್ಯಕ್ಷರ ಆಯ್ಕೆ ವಿವಾದ ಭುಗಿಲೆದ್ದಿದೆ.
ದೇವರಾಜ ಅರಸು ಟ್ರಸ್ಟ್ ಅಧ್ಯಕ್ಷ ಸ್ಥಾನವನ್ನು ಕುಟುಂಬದವರಿಗೆ ನೀಡಬೇಕೆಂದು ಆಗ್ರಹಿಸಿ ಜಾಲಪ್ಪನವರ ಕುಟುಂಬದ ಸದಸ್ಯರು ಹಾಗೂ ಬೆಂಬಲಿಗರು ಪ್ರತಿಭಟನೆ ನಡೆಸಿದ್ದು, ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದರಿಂದ ಹಲವರಿಗೆ ಗಾಯಗಳಾಗಿವೆ.
ದೇವರಾಜ ಅರಸು ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಸ್ಥಾನಕ್ಕೆ ನಾಗರಾಜ್ ಅವರನ್ನು ಇತ್ತೀಚೆಗೆ ನೇಮಕ ಮಾಡಲಾಗಿದೆ. ಅವರ ಆಯ್ಕೆ ನಿಯಮಬಾಹಿರವಾಗಿದೆ ಎಂದು ಕುಟುಂಬದ ಸದಸ್ಯರು ಆರೋಪಿಸಿ, ಪ್ರತಿಭಟನೆ ನಡೆಸಿದ್ದಾರೆ. ಟ್ರಸ್ಟ್ ಅಧ್ಯಕ್ಷ ನಾಗರಾಜ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದು, ನಾಗರಾಜ್ ಅಭಿನಂದನಾ ಸಮಾರಂಭದ ಫ್ಲೆಕ್ಸ್, ಬ್ಯಾನರ್ ಕಿತ್ತೆಸೆದಿದ್ದಾರೆ. ಬೆಂಬಲಿಗರು ಆಡಳಿತ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಆರ್.ಎಲ್. ಜಾಲಪ್ಪ ಆಸ್ಪತ್ರೆ ಮತ್ತು ವೈದ್ಯಕೀಯ ಶಿಕ್ಷಣ ಸಂಸ್ಥೆ ಟ್ರಸ್ಟ್ ಅಧಿಕಾರದ ವಿಚಾರ ಬೀದಿಗೆ ಬಂದಿದ್ದು, ಜಾಲಪ್ಪ ಕುಟುಂಬದ 12 ಸದಸ್ಯರು ನೂತನ ಸಮಿತಿ ರಚಿಸಿದ್ದಾರೆ. ಜಾಲಪ್ಪನವರ ಹಿರಿಯ ಪುತ್ರ, ಮಾಜಿ ಶಾಸಕ ನರಸಿಂಹಸ್ವಾಮಿ ಅಧ್ಯಕ್ಷರಾಗಿದ್ದಾರೆ. ಈ ಕಮಿಟಿಗೆ ಮಾನ್ಯತೆ ನೀಡಬೇಕು ಎಂದು ಕುಟುಂಬ ಸದಸ್ಯರು ಮನವಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.