ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ಆಯೋಜಿಸಿದ್ದ ಟಿ20 ವಿಶ್ವಕಪ್ ವಿಜೇತ ಇಂಗ್ಲೆಂಡ್ ತಂಡದೊಂದಿಗೆ ಬ್ರಿಟನ್ ಪ್ರಧಾನಿ ರಿಶಿ ಸುನಕ್ ಕ್ರಿಕೆಟ್ ಆಡುತ್ತಾ ಒಂದಷ್ಟು ಸಮಯ ಕಳೆದಿರುವ ಚಿತ್ರಗಳು ವೈರಲ್ ಆಗಿವೆ.
ತಮ್ಮ ಅಧಿಕೃತ ನಿವಾಸ 10 ಡೌನಿಂಗ್ ಸ್ಟ್ರೀಟ್‌ನಲ್ಲಿ ಭಾರತ ಮೂಲದ ಸುನಕ್ ಒಂದಷ್ಟು ಹೊತ್ತು ಬ್ಯಾಟಿಂಗ್ ಮಾಡುತ್ತಾ, ವೇಗದ ಬೌಲರ್‌ಗಳಾದ ಸ್ಯಾಮ್ ಕರ‍್ರನ್ ಹಾಗೂ ಕ್ರಿಸ್ ಜೋರ್ಡಾನ್‌ರ ಎಸೆತಗಳನ್ನು ಎದುರಿಸಿದ್ದಾರೆ. ಬಳಿಕ ಬೌಲಿಂಗ್ ಸಹ ಮಾಡಿದ್ದಾರೆ ರಿಶಿ ಸುನಕ್.
ಪ್ರಧಾನ ಮಂತ್ರಿಯವರ ಹಿರಿಯ ವಿಡಿಯೋಗ್ರಾಫರ್ ಲ್ಯುಕಾ ಬೊಫಾ ಈ ಕ್ಷಣಗಳ ವಿಡಿಯೋವೊಂದನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ಡೌನಿಂಗ್ ಸ್ಟ್ರೀಟ್‌ನಲ್ಲಿ ಪ್ರಧಾನಿಯನ್ನು ಭೇಟಿಯಾದ ಕ್ಷಣಗಳ ಚಿತ್ರಗಳನ್ನು ಇಂಗ್ಲೆಂಡ್ ಸೀಮಿತ ಓವರ್ ತಂಡದ ನಾಯಕ ಜಾಸ್ ಬಟ್ಲರ್ ಶೇರ್ ಮಾಡಿಕೊಂಡಿದ್ದಾರೆ.
ಲಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲಾನ್, ಫಿಲ್ ಸಾಲ್ಟ್, ಕ್ರಿಸ್ ವೋಕ್ಸ್, ರಿಚರ್ಡ್ ಗ್ಲೀಸನ್ ಹಾಗೂ ಟಿಮಲ್ ಮಿಲ್ಸ್ ಸಹ ಈ ವೇಳೆ ಪ್ರಧಾನಿಯೊಂದಿಗೆ ಕ್ರಿಕೆಟ್‌ನ ಮೋಜು ಸವಿದಿದ್ದಾರೆ.
ಪಾಕಿಸ್ತಾನ ವಿರುದ್ಧ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಐದು ವಿಕೆಟ್‌ಗಳಿಂದ ಜಯಗಳಿಸಿದ ಇಂಗ್ಲೆಂಡ್, ಎರಡನೇ ಬಾರಿಗೆ ಟಿ20 ವಿಶ್ವಕಪ್ ಎತ್ತಿ ಹಿಡಿದು ಬೀಗಿದೆ. ಏಕಕಾಲದಲ್ಲಿ ಏಕದಿನ ಹಾಗೂ ಟಿ20 ವಿಶ್ವಕಪ್‌ಗಳನ್ನು ಎತ್ತಿ ಹಿಡಿದ ಮೊದಲ ತಂಡ ಇಂಗ್ಲೆಂಡ್ ಆಗಿದೆ.