ಹಲ್ದ್ವಾನಿ: ಗುರುವಾರ ಉತ್ತರಾಖಂಡದ ಹಲ್ದ್ವಾನಿಯಲ್ಲಿ ಅಕ್ರಮ ಮದರಸಾವನ್ನು ಅಧಿಕಾರಿಗಳು ಧ್ವಂಸಗೊಳಿಸಿದ ನಂತರ ಘರ್ಷಣೆಗಳು ನಡೆದಿದ್ದು, ದುಷ್ಕರ್ಮಿಗಳು ಪೊಲೀಸ್ ಅಧಿಕಾರಿಗಳ ಮೇಲೆ ಕಲ್ಲು ಎಸೆದಿದ್ದಾರೆ. ಪೊಲೀಸ್ ಕಾರ್ ಸೇರಿದಂತೆ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.
ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಹಲ್ವಾನಿಯ ಬಂಭುಲ್ಪುರದಲ್ಲಿ ಕಂಡಲ್ಲಿ ಗುಂಡಿಕ್ಕಲು ಆದೇಶ ಹೊರಡಿಸಿದ್ದಾರೆ. ಗಲಭೆಗಳನ್ನು ಗಮನದಲ್ಲಿಟ್ಟುಕೊಂಡು ಕರ್ಫ್ಯೂ ವಿಧಿಸಲಾಗಿದೆ. ಇದರೊಂದಿಗೆ ಶುಕ್ರವಾರ ಹಲ್ದ್ವಾನಿಯಲ್ಲಿ ಎಲ್ಲಾ ಶಾಲೆಗಳನ್ನು ಮುಚ್ಚಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು.
ಹಲ್ದ್ವಾನಿಯ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಇಂದು ಬಂಭುಲ್ಪುರ ಪೊಲೀಸ್ ಠಾಣೆ ಬಳಿ ಅಕ್ರಮವಾಗಿ ನಿರ್ಮಿಸಲಾದ ಮದರಸಾವನ್ನು ಕೆಡವಿದರು.
ಪ್ರತೀಕಾರವಾಗಿ, ಸಮೀಪದಲ್ಲಿ ವಾಸಿಸುವ ವ್ಯಕ್ತಿಗಳ ಗುಂಪು ಪೊಲೀಸ್ ಅಧಿಕಾರಿಗಳ ಮೇಲೆ ಕಲ್ಲು ತೂರಾಟವನ್ನು ಪ್ರಾರಂಭಿಸಿತು, ಇದರಿಂದಾಗಿ ಹಲವಾರು ಅಧಿಕಾರಿಗಳಿಗೆ ಗಾಯಗಳಾಗಿವೆ.
ಈ ಪ್ರದೇಶದಲ್ಲಿ ಪೊಲೀಸ್ ವಾಹನಗಳು ಸೇರಿದಂತೆ ಹಲವಾರು ವಾಹನಗಳನ್ನು ಧ್ವಂಸಗೊಳಿಸಲಾಯಿತು ಮತ್ತು ಬೆಂಕಿ ಹಚ್ಚಲಾಯಿತು.
ಹೆಚ್ಚುವರಿಯಾಗಿ, ಟ್ರಾನ್ಸ್‌ಫಾರ್ಮರ್‌ಗೆ ಬೆಂಕಿ ಹಚ್ಚಲಾಗಿದ್ದು, ಸುತ್ತಮುತ್ತಲಿನ ವಿದ್ಯುತ್ ವ್ಯತ್ಯಯವಾಗಿದೆ.
ಜನಸಮೂಹವು ಬಂಭುಲ್‌ಪುರ ಪೊಲೀಸ್ ಠಾಣೆಯನ್ನು ಸುತ್ತುವರಿದಿದ್ದರಿಂದ ಹಲವಾರು ಪತ್ರಕರ್ತರು ಮತ್ತು ಆಡಳಿತ ಅಧಿಕಾರಿಗಳು ಪೊಲೀಸ್ ಠಾಣೆಯೊಳಗೆ ಸಿಕ್ಕಿಬಿದ್ದಿದ್ದಾರೆ. ಪರಿಸ್ಥಿತಿ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹಲ್ದ್ವಾನಿಗೆ ಹೆಚ್ಚುವರಿ ಪಡೆಗಳನ್ನು ಕರೆಸಿಕೊಳ್ಳಲಾಗಿದೆ.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರೊಂದಿಗೆ ಸಭೆ ನಡೆಸಿದ ನಂತರ, ಬಂಭುಲ್ಪುರದಲ್ಲಿ ಕರ್ಫ್ಯೂ ವಿಧಿಸಲಾಯಿತು. ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಮಾತ್ರ ಜನರು ಹೊರಬರಲು ಅವಕಾಶ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರಿಸ್ಥಿತಿ ಕುರಿತು ಮಾತನಾಡಿದ ಧಾಮಿ, ಹಲ್ದ್ವಾನಿಯ ಬಂಭುಲ್‌ಪುರ ಪ್ರದೇಶದಲ್ಲಿ, ನ್ಯಾಯಾಲಯದ ಆದೇಶದ ಮೇರೆಗೆ ಆಡಳಿತದ ತಂಡವು ಅತಿಕ್ರಮಣ ವಿರೋಧಿ ಅಭಿಯಾನಕ್ಕೆ ತೆರಳಿತ್ತು. ಅಲ್ಲಿ ಸಮಾಜ ವಿರೋಧಿಗಳು ಪೊಲೀಸರೊಂದಿಗೆ ಜಗಳವಾಡಿದರು. ಕೆಲವು ಪೊಲೀಸ್ ಸಿಬ್ಬಂದಿ ಮತ್ತು ಆಡಳಿತಾಧಿಕಾರಿಗಳಿಗೆ ಗಾಯಗಳಾಗಿವೆ. ಹೆಚ್ಚುವರಿ ಪೊಲೀಸ್ ಮತ್ತು ಕೇಂದ್ರ ಪಡೆಗಳನ್ನು ಅಲ್ಲಿಗೆ ಕಳುಹಿಸಲಾಗುತ್ತಿದೆ. ಶಾಂತಿ ಕಾಪಾಡುವಂತೆ ನಾವು ಎಲ್ಲರಿಗೂ ಮನವಿ ಮಾಡಿದ್ದೇವೆ. ಕರ್ಫ್ಯೂ ಜಾರಿಯಲ್ಲಿದೆ. ದಂಗೆಕೋರರು ಮತ್ತು ಅತಿಕ್ರಮಣಕಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿವರ ನೀಡಿದ್ದಾರೆ.
ಅರೆಸೇನಾ ಪಡೆಗಳನ್ನು ರಾಜ್ಯಕ್ಕೆ ಕಳುಹಿಸಿರುವುದರಿಂದ ಬಂಭುಲ್‌ಪುರದ ಪರಿಸ್ಥಿತಿ ಈಗ ಸುಧಾರಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.