ದಿನಕ್ಕೊಂದು ಸೇಬು ತಿನ್ನಿ ಆರೋಗ್ಯ ಕಾಪಾಡಿಕೊಳ್ಳಿ ಎನ್ನುವ ಮಾತೇ ಇದೆ. ಅನೇಕರು ಸೇಬು ಸೇವನೆಯನ್ನು ಇಷ್ಟಪಡ್ತಾರೆ. ಸೇಬು ಹಣ್ಣು ಸಾಕಷ್ಟು ಪೋಷಕಾಂಶಗಳನ್ನು ಹೊಂದಿದೆ. ಪೊಟ್ಯಾಸಿಯಮ್, ವಿಟಮಿನ್ ಸಿ, ರಂಜಕ, ಮೆಗ್ನಿಸಿಯಂ, ಬಿ 6, ಇ, ಕೆ, ಪ್ರೋಟೀನ್ ಸೇರಿದಂತೆ ಅನೇಕ ಅಂಶಗಳು ಇದರಲ್ಲಿವೆ. ಆದ್ರೆ ಸೇಬು ಕೂಡ ಆಮ್ಲವನ್ನು ಹೊಂದಿದೆ. ಅದ್ರಲ್ಲಿ ಸಿಟ್ರಸ್ ಹಣ್ಣಿಗಿಂತ ಕಡಿಮೆ ಪ್ರಮಾಣದ ಆಮ್ಲೀಯತೆ ಇದೆ. ಬಾಳೆ ಹಣ್ಣು ಹಾಗೂ ದ್ರಾಕ್ಷಿ ಹಣ್ಣಿಗಿಂತ ಇದ್ರಲ್ಲಿ ಆಮ್ಲೀಯತೆ ಹೆಚ್ಚಿದ್ದು, ಅದು ಮಾಲಿಕ್ ಮತ್ತು ಆಸ್ಕೋರ್ಬಿಕ್ ಆಮ್ಲವನ್ನು ಹೊಂದಿರುತ್ತದೆ.
ಸೇಬು ಹಣ್ಣು ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಕಾರಣಕ್ಕೆ ಯಾವಾಗ ಬೇಕಾದ್ರೂ ಅದನ್ನು ಸೇವನೆ ಮಾಡುವಂತಿಲ್ಲ. ನಿಮಗೆ ಅಸಿಡಿಟಿ ಸಮಸ್ಯೆ ಇದ್ದಲ್ಲಿ ನೀವು ಖಾಲಿ ಹೊಟ್ಟೆಯಲ್ಲಿ ಸೇಬು ಹಣ್ಣನ್ನು ತಿನ್ನಲು ಹೋಗಬೇಡಿ. ಆಹಾರ ಸೇವನೆ ಮಾಡಿದ ಎರಡು ಗಂಟೆ ನಂತ್ರ ಸೇಬು ಹಣ್ಣನ್ನು ತಿನ್ನಿ.
ನೀವು ಡೈರಿ ಉತ್ಪನ್ನಗಳ ಜೊತೆ ಸೇಬು ತಿನ್ನುವ ಸಹವಾಸಕ್ಕೆ ಹೋಗ್ಬೇಡಿ. ಇದ್ರಲ್ಲಿ ಸಿಟ್ರಿಕ್ ಇರುವ ಕಾರಣ, ಹಾಲಿನಲ್ಲಿರುವ ಲ್ಯಾಕ್ಟಿಕ್ ಆಮ್ಲದ ಜೊತೆ ಪ್ರತಿಕ್ರಿಯಿಸುತ್ತದೆ. ಇದು ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ.
ಸೇಬು ಮಿಲ್ಕ್ ಶೇಕ್ ಸೇವನೆಗೆ ರುಚಿಯಾಗಿದ್ದರೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಕರುಳಿನ ಸಮಸ್ಯೆ ಜೊತೆ ಎಸ್ಜಿಮಾ, ಸೋರಿಯಾಸಿಸ್ ನಂತಹ ಚರ್ಮದ ಸಮಸ್ಯೆಗೆ ಕಾರಣವಾಗುತ್ತದೆ.
ಸೇಬು ಹಣ್ಣಿನ ಸಿಪ್ಪೆ ತೆಗೆದು ಸೇವನೆ ಮಾಡಿ. ಸಿಪ್ಪೆ ಸಮೇತ ಹಣ್ಣು ತಿನ್ನುವವರು ಅದನ್ನು ಸ್ವಚ್ಛವಾಗಿ ತೊಳೆದು ತಿನ್ನಬೇಕು.
ಮಕ್ಕಳ ಟಿಫನ್ ಬಾಕ್ಸ್ ಗೆ ನೀವು ಸೇಬು ಹಣ್ಣನ್ನು ಹಾಕುತ್ತಿದ್ದರೆ ಅದರ ಹೋಳುಗಳನ್ನು ಚಿಟಕಿ ಉಪ್ಪು ಬೆರೆಸಿದ ಬೆಚ್ಚಗಿನ ನೀರಿನಲ್ಲಿ ಕೆಲ ಸಮಯ ನೆನೆಸಿ ನಂತ್ರ ನೀಡಿ. ಆಗ ಹಣ್ಣು ಕಪ್ಪು ಬಣ್ಣಕ್ಕೆ ತಿರುಗುವುದಿಲ್ಲ.
ಮಲಬದ್ಧತೆ ಇರುವವರು ಸೇಬು ಹಣ್ಣನ್ನು ಬೇಯಿಸಿ ತಿನ್ನುವುದು ಉತ್ತಮ. ಇದು ಸುಲಭವಾಗಿ ಜೀರ್ಣವಾಗುತ್ತದೆ.