ಜನಪ್ರಿಯ ರೈಡ್ ಹೇಲಿಂಗ್ ಅಪ್ಲಿಕೇಶನ್‌ಗಳಾದ ಓಲಾ ಮತ್ತು ಊಬರ್ ತಮ್ಮ ಸವಾರರ ಬಗ್ಗೆ ವ್ಯಾಪಕ ಮಾಹಿತಿ ಸಂಗ್ರಹಿಸುತ್ತಿವೆ ಎಂದು ಸೈಬರ್-ಸೆಕ್ಯುರಿಟಿ ಕಂಪನಿ ಸರ್ಫ್‌ಶಾರ್ಕ್‌ನ ಡೇಟಾ ಸೆನ್ಸಿಟಿವಿಟಿ ಇಂಡೆಕ್ಸ್‌ನಲ್ಲಿ ತಿಳಿದುಬಂದಿದೆ. ಈ ಅಪ್ಲಿಕೇಶನ್‌ಗಳು ಈ ಮಾಹಿತಿಯನ್ನ ಥರ್ಡ್ ಪಾರ್ಟಿಗೆ ಮಾರಾಟ ಮಾಡುತ್ತಿದ್ದಾರೆ, ಅವರುಗಳು ಜಾಹೀರಾತಿಗಾಗಿ ಸವಾರರ ಮಾಹಿತಿ ಬಳಸಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.
ಭಾರತದ ದೊಡ್ಡ ರೈಡ್ ಹೇಲಿಂಗ್ ಅಪ್ಲಿಕೇಶನ್ ಊಬರ್, ಸವಾರರ ಮಾಹಿತಿ ಸಂಗ್ರಹಿಸಿ ಮೂರನೇ ವ್ಯಕ್ತಿಗೆ ನೀಡುವ ಶ್ರೇಯಾಂಕದಲ್ಲಿ ಜಾಗತಿಕವಾಗಿ ಮೂರನೇ ಸ್ಥಾನದಲ್ಲಿದೆ. ಇತ್ತ ಭಾರತದ ನಂ 1 ರೈಡ್-ಹೇಲಿಂಗ್ ಅಪ್ಲಿಕೇಶನ್ ಓಲಾ ಜಾಗತಿಕ ಡೇಟಾ-ಹಂಗ್ರಿನೆಸ್ ಶ್ರೇಯಾಂಕದಲ್ಲಿ ಆರನೇ ಸ್ಥಾನದಲ್ಲಿದೆ (ಒಟ್ಟು 18 ಡೇಟಾ ಪಾಯಿಂಟ್‌ಗಳನ್ನು ಸಂಗ್ರಹಿಸಲಾಗಿದೆ).
ಭಾರತೀಯ ಬೈಕ್-ಟ್ಯಾಕ್ಸಿ ಅಗ್ರಿಗೇಟರ್ ರಾಪಿಡೊ, ಶ್ರೇಯಾಂಕದಲ್ಲಿ ಕಡಿಮೆ ಪ್ರಮಾಣದ ಡೇಟಾವನ್ನು ಸಂಗ್ರಹಿಸುತ್ತದೆ ಎಂದು ವರದಿ ಹೇಳಿದೆ. ಇದು ಉಳಿದ ಪ್ರಮುಖ ಅಪ್ಲಿಕೇಶನ್‌ಗಳಿಗಿಂತ ಸುಮಾರು 10 ಪಟ್ಟು ಕಡಿಮೆ ಡೇಟಾವನ್ನು ಸಂಗ್ರಹಿಸುತ್ತದೆ. ರಾಪಿಡೊ ತನ್ನ ಸೇವೆಗಳನ್ನ ನೀಡಲು ಅದರ ಬಳಕೆದಾರರ ಹೆಸರು, ಫೋನ್ ಸಂಖ್ಯೆ ಮತ್ತು ಸ್ಥಳವನ್ನು ಮಾತ್ರ ಸಂಗ್ರಹಿಸುತ್ತದೆ ಎಂದು ಸರ್ಫ್‌ಶಾರ್ಕ್ ತಿಳಿಸಿದೆ.
ಮೊದಲೇ ಹೇಳಿದಂತೆ ಈ ಜನಪ್ರಿಯ ರೈಡ್-ಹೇಲಿಂಗ್ ಮತ್ತು ಟ್ಯಾಕ್ಸಿ ಡೇಟಾ-ಹಂಗ್ರಿ ಅಪ್ಲಿಕೇಶನ್‌ಗಳು ಸೇವೆ ನೀಡುವುದರ ಜೊತೆಗೆ ಅಗತ್ಯಕ್ಕಿಂತ ಹೆಚ್ಚುವರಿಯಾಗಿ ಸಂಪರ್ಕ, ಪಾವತಿ ಮಾಹಿತಿ, ಬಳಕೆದಾರರ ವಿಷಯ ಮತ್ತು ಇತರ ಡೇಟಾವನ್ನು ಮೂರನೇ ವ್ಯಕ್ತಿಗೆ ಮಾರ್ಕೆಟಿಂಗ್ ಉದ್ದೇಶಗಳಿಗಾಗಿ ಬಳಸುತ್ತಿವೆ ಎಂದು ಸರ್ಫ್‌ಶಾರ್ಕ್ ಬಹಿರಂಗಪಡಿಸಿದೆ. ಗ್ರಾಬ್‌ಟ್ಯಾಕ್ಸಿ (ಆಗ್ನೇಯ ಏಷ್ಯಾ) ಮತ್ತು ಯಾಂಡೆಕ್ಸ್ ಗೋ (ಮಧ್ಯ ಏಷ್ಯಾ) ಈ ಪಟ್ಟಿಯಲ್ಲಿ ಮೊದಲ ಮತ್ತು ಎರಡನೇ ಸ್ಥಾನವನ್ನು ಪಡೆದುಕೊಂಡಿವೆ.
ಬಳಕೆದಾರರ ಜನಾಂಗ, ಜನಾಂಗೀಯತೆ, ಲೈಂಗಿಕ ದೃಷ್ಟಿಕೋನ, ಗರ್ಭಧಾರಣೆ, ಹೆರಿಗೆಯ ಮಾಹಿತಿ ಮತ್ತು ಬಯೋಮೆಟ್ರಿಕ್ ಡೇಟಾವನ್ನು ಒಳಗೊಂಡಿರುವ ಸೂಕ್ಷ್ಮ ಮಾಹಿತಿಯನ್ನು ಹೆಚ್ಚುವರಿಯಾಗಿ ಸಂಗ್ರಹಿಸುವ ಏಕೈಕ ರೈಡ್-ಹೇಲಿಂಗ್ ಅಪ್ಲಿಕೇಶನ್ ಊಬರ್ ಎಂದು ನೆದರ್‌ಲ್ಯಾಂಡ್‌ನಲ್ಲಿರುವ ಸರ್ಫ್‌ಶಾರ್ಕ್‌ನ ಸಿಇಒ ಕಾಜಿಯುಕೋನಿಸ್ ಹೇಳಿದ್ದಾರೆ.