ಅಮೆರಿಕಾದ ದಕ್ಷಿಣ ಕೆರೊಲಿನಾದಲ್ಲಿರುವ ಗ್ರೀನ್‌ವಿಲ್ಲೆ ಎಂಬಲ್ಲಿ 7 ಕೋಟಿ ರೂ. ಬೆಲೆಬಾಳುವ ಆರು ಬೆಡ್‌ರೂಂಗಳ ಮನೆಯಲ್ಲಿ ಶ್ರೀಮಂತ ದಂಪತಿ ಹಾಗೂ ಅವರ 9 ವರ್ಷದ ಮಗಳು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆ ಸ್ಥಳೀಯವಾಗಿ ಆಘಾತವನ್ನುಂಟುಮಾಡಿದೆ.
ಸ್ವಾರ್ಟನ್‌ಬರ್ಗ್ ಕೌಂಟಿ ಶೆರಿಫ್ ಕಚೇರಿಯ ಪ್ರಕಾರ, ನೆರೆಹೊರೆಯವರು ನೀಡಿದ ಮಾಹಿತಿಯ ಆಧಾರದ ಮೇಲೆ ಗ್ರೀರ್‌ನಲ್ಲಿರುವ ಅವರ ಬಂಗಲೆಯಲ್ಲಿ ಪೋಲೀಸರು ಮೃತದೇಹಗಳನ್ನು ಪತ್ತೆ ಮಾಡಿದ್ದಾರೆ. ಮೃತರನ್ನು ರಿಚರ್ಡ್ ಸಮಾರೆಲ್ (54), ಲಿನಾ ಮಾರಿಯಾ ಸಮಾರೆಲ್ (45) ಮತ್ತು ಅವರ ಮಗಳು ಸಮಂತಾ ಸಮಾರೆಲ್ ಎಂದು ಗುರುತಿಸಲಾಗಿದೆ. ಈ ಕುಟುಂಬದ ಸಾವು ಮಾರ್ಚ್ 28 ರಂದು ಬೆಳಗ್ಗೆ 10:20 ರಿಂದ 11:29 ರ ನಡುವೆ ಸಂಭವಿಸಿದೆ ಎಂದು ಪೋಲೀಸ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಪೋಲೀಸರು ಈ ಅಪರಾಧದ ವಿವರಗಳನ್ನು ಬಹಿರಂಗಪಡಿಸಿಲ್ಲ ಮತ್ತು ಬಲಿಪಶುಗಳು ಕೊಲೆಯಾಗಿದ್ದಾರೆಯೇ ಅಥವಾ ಯಾವುದಾದರೂ ಅಪಘಾತದಿಂದ ಸಾವನ್ನಪ್ಪಿದ್ದಾರೆಯೇ ಎಂಬುದರ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸಾರ್ವಜನಿಕರಿಗೆ ಯಾವುದೇ ಬೆದರಿಕೆ ಇಲ್ಲ ಎಂದು ಹೇಳಿದ್ದಾರೆ. ಘಟನೆ ನಡೆದಾಗ ಮನೆಯ ಇತರ ನಿವಾಸಿಗಳು ಶಾಲೆಯಲ್ಲಿದ್ದರಿಂದ ಈ ಘಟನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲು ಪೋಲೀಸರು ಹಿಂಜರಿಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಲಿನಾ ಮಾರಿಯಾ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಪ್ರಕಾರ, ಮನೆಯ ಇತರ ನಿವಾಸಿಗಳು ದಂಪತಿಯ ಇತರ ಮಗಳು ಮತ್ತು ಚಿಕ್ಕ ಮಗುವಾಗಿರಬಹುದು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಕಾರ್ನರ್ ಕಚೇರಿ ಮತ್ತು ಪೋಲೀಸ್ ಏಜೆನ್ಸಿಗಳು ಈ ಘಟನೆಯ ತನಿಖೆಯನ್ನು ಪೂರ್ಣಗೊಳಿಸಿದ ನಂತರ ಸೂಕ್ತ ಸಮಯದಲ್ಲಿ ಹೆಚ್ಚಿನ ಮಾಹಿತಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಶೆರಿಫ್ ಕಚೇರಿ ತಿಳಿಸಿದೆ. ರಿಚರ್ಡ್ ಸಮಾರೆಲ್ 2007 ರಲ್ಲಿ ಕಂಪನಿಯನ್ನು ತೊರೆಯುವ ಮೊದಲು ಬ್ಲೂಮ್‌ಬರ್ಗ್ ಎಲ್‌ಪಿಯಲ್ಲಿ ಇಕ್ವಿಟಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು ಮತ್ತು ಅವರ ಪತ್ನಿ ಲಿನಾ ಕೊಲಂಬಿಯಾದ ವಲಸಿಗರಾಗಿದ್ದು, ಯುಎಸ್ ಡಿಪಾರ್ಟ್‌ಮೆಂಟ್ ಆಫ್ ವೆಟರನ್ಸ್ ಅಫೇರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅವರ ಫೇಸ್‌ಬುಕ್ ಪ್ರೊಫೈಲ್‌ಗಳಿಂದ ತಿಳಿದುಬಂದಿದೆ.