ಬೆಳಗಾವಿ: ರಾಗಿ, ಜೋಳ, ಭತ್ತವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಿ ಏಪ್ರಿಲ್ 1 ರಿಂದ ಪಡಿತರ ವ್ಯವಸ್ಥೆಯಲ್ಲಿ ವಿತರಣೆ ಮಾಡಲಾಗುವುದು.
ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಗ್ರಾಹಕರ ವ್ಯವಹಾರಗಳ ಖಾತೆ ಸಚಿವ ಉಮೇಶ್ ಕತ್ತಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫಲಾನುಭವಿಗಳಿಗೆ ನೀಡುವ ಪಡಿತರ ಪ್ರಮಾಣದಲ್ಲಿ ಕಡಿತ ಮಾಡುತ್ತಿಲ್ಲ. ಜನರು ಏನನ್ನು ಇಷ್ಟಪಡುತ್ತಾರೆಯೋ ಅದನ್ನೇ ಪಡಿತರದಲ್ಲಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಅಕ್ಕಿ ಜೊತೆಗೆ ಜೋಳ, ದಕ್ಷಿಣ ಕರ್ನಾಟಕ ಭಾಗದಲ್ಲಿ ಅಕ್ಕಿ ಜೊತೆಗೆ ರಾಗಿ ನೀಡಲಾಗುವುದು. ಭೌಗೋಳಿಕ ಆಹಾರ ಪದ್ಧತಿಗೆ ಅನುಗುಣವಾಗಿ ಪಡಿತರ ವಿತರಿಸಲಾಗುವುದು. ಜನ ಸಂಪೂರ್ಣವಾಗಿ ಅಕ್ಕಿ ಕೊಡಿ ಎಂದರೆ ಅಕ್ಕಿಯನ್ನೇ ಕೊಡುತ್ತೇವೆ ಎಂದು ಹೇಳಿದ್ದಾರೆ.
ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ರಾಜ್ಯ ಸಚಿವರನ್ನು ದೆಹಲಿಯಲ್ಲಿ ಭೇಟಿಯಾಗಿ ಈ ಬಗ್ಗೆ ಮನವಿ ಸಲ್ಲಿಸಿದ್ದೇನೆ. ಸದ್ಯ ಅಕ್ಕಿ ಮತ್ತು ಗೋಧಿ ವಿತರಿಸುತ್ತಿದ್ದು, ಇವುಗಳ ಪ್ರಮಾಣ ಕಡಿತ ಮಾಡಿ ರಾಗಿ ಅಥವಾ ಜೋಳ ನೀಡಲಾಗುವುದು ಎಂದು ಹೇಳಿದ್ದಾರೆ.