ಶಿವಮೊಗ್ಗ: ಜನರಲ್ಲಿ ಅಪೌಷ್ಟಿಕತೆ ನೀಗಿಸುವ ಉದ್ದೇಶದಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ಎಲ್ಲಾ ಅರ್ಹ ಪಡಿತರ ಚೀಟಿದಾರರಿಗೆ ಈ ತಿಂಗಳಿನಿಂದಲೇ ಸಾರವರ್ಧಿತ ಅಕ್ಕಿ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ 75 ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಭಾಷಣದಲ್ಲಿ ಘೋಷಿಸಿದಂತೆ ಸಾರವರ್ಧಿತ ಅಕ್ಕಿಯನ್ನು ಮೊದಲ ಹಂತದಲ್ಲಿ ರಾಜ್ಯದ 14 ಜಿಲ್ಲೆಗಳಲ್ಲಿ ವಿತರಿಸಲಾಗುತ್ತದೆ. ಅದರಲ್ಲಿ ಶಿವಮೊಗ್ಗ ಜಿಲ್ಲೆ ಕೂಡ ಸೇರಿದೆ ಎಂದರು.
ಮಕ್ಕಳು, ಮಹಿಳೆಯರು, ಹಾಲುಣಿಸುವ ತಾಯಂದಿರಲ್ಲಿ ಅಪೌಷ್ಟಿಕತೆ ನೀಗಿಸುವ, ಅವರ ಬೆಳವಣಿಗೆಯಲ್ಲಿ ಅಗತ್ಯ ಪೋಷಕಾಂಶಗಳ ಕೊರತೆ ನೀಗಿಸುವ ಉದ್ದೇಶದಿಂದ ಸಾರವರ್ಧಿತ ಅಕ್ಕಿ ನೀಡಲಾಗುತ್ತದೆ. ಅಲ್ಲದೇ, ಸರ್ಕಾರದ ಎಲ್ಲ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಮತ್ತು ಅಂಗನವಾಡಿ ಮಕ್ಕಳಿಗಾಗಿರುವ ಯೋಜನೆಗಳಲ್ಲಿಯೂ ಸಾರವರ್ಧಿತ ಅಕ್ಕಿ ಮಾಡಿಕೊಳ್ಳಲಾಗುವುದು.
ಈ ಅಕ್ಕಿಯಲ್ಲಿ ಕಬ್ಬಿಣಾಂಶ, ಫೋಲಿಕ್ ಆಮ್ಲ ಮತ್ತು ವಿಟಮಿನ್ ಬಿ12, ಜಿಂಕ್, ವಿಟಮಿನ್ ಎ, ವಿಟಮಿನ್ ಬಿ2 ವಿಟಮಿನ್ ಬಿ3, ವಿಟಮಿನ್ ಬಿ6 ಸೇರಿದಂತೆ ಅನೇಕ ಪೋಷಕಾಂಶಗಳನ್ನು ಸೇರ್ಪಡೆಗೊಳಿಸಲಾಗಿದೆ.