ಬೆಂಗಳೂರು: ಬರ, ಬಿಸಿಲು, ತಾಪಮಾನ ಏರಿಕೆ, ನೀರಿನ ಕೊರತೆ ಮೊದಲಾದ ಕಾರಣಗಳಿಂದ ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಬಡ, ಮಧ್ಯಮ ವರ್ಗದವರು ತತ್ತರಿಸಿ ಹೋಗಿದ್ದಾರೆ.
ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಕಳೆದ 15 ದಿನಗಳಲ್ಲಿ ಆಹಾರ ಪದಾರ್ಥಗಳ ಬೆಲೆ ಭಾರಿ ಏರಿಕೆ ಕಂಡಿದೆ. ಇಳುವರಿ ಕಡಿಮೆಯಾಗಿ ಬೇಳೆ ಕಾಳುಗಳ ಕೊರತೆ ಕಂಡು ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ತೊಗರಿಬೇಳೆ ಮತ್ತು ಅಕ್ಕಿ ದರ ಶೇಕಡ 15ರಷ್ಟು ಏರಿಕೆ ಕಂಡಿದ್ದು, ಉದ್ದಿನಬೇಳೆ, ಗೋಧಿ ಹಿಟ್ಟಿನ ದರ ಶೇಕಡ 10ರಷ್ಟು ಏರಿಕೆ ಕಂಡಿದೆ. ನಾಟಿ ಬೀನ್ಸ್ ದರ ಒಂದು ಕೆಜಿಗೆ 200 ರೂಪಾಯಿ ತಲುಪಿದ್ದು, ಸೇಬು ಹಣ್ಣಿನ ದರ ದ್ವಿಶತಕ ದಾಟಿದೆ. ಕೆಜಿಗೆ 280 ವರೆಗೆ ಸೇಬು ಮಾರಾಟವಾಗುತ್ತಿದೆ. ದಾಳಿಂಬೆ ದರ ಕೆಜಿಗೆ 220 ರೂ.ನಿಂದ 260 ರೂ.ವರೆಗೆ ಇದ್ದು, ತೊಗರಿ ಬೇಳೆ 180 ರಿಂದ 200 ರೂಪಾಯಿವರೆಗೂ ಇದೆ.
ಕೊತ್ತಂಬರಿ ಸೊಪ್ಪು ಒಂದು ಕಟ್ಟಿಗೆ 10 ರಿಂದ 15 ರೂ., ಸಬ್ಬಸಿಗೆ 30 ರಿಂದ 40 ರೂ., ಮೆಂತೆ 20 ರಿಂದ 25 ರೂ., ಪಾಲಕ್ ಸೊಪ್ಪು 30 ರೂ., ಕರಿಬೇವು 10 ರಿಂದ 15 ರೂ., ಸೌತೆಕಾಯಿ ಕೆಜಿಗೆ 60 ರಿಂದ 70 ರೂ., ಒಂದು ನಿಂಬೆಹಣ್ಣು 10 ರೂ., ಮೂರು ನಿಂಬೆಹಣ್ಣಿಗೆ 20 ರೂಪಾಯಿ ದರ ಇದೆ.
ಕಳೆದ ವರ್ಷ ಕೆಜಿಗೆ 160 ರೂಪಾಯಿ ಇದ್ದ ಕೋಳಿ ಮಾಂಸದ ದರ ಈಗ 260 ರೂ. ದಾಟಿದೆ. ವಿತೌಟ್ ಸ್ಕಿನ್ 320 ರೂಪಾಯಿವರೆಗೆ ಏರಿಕೆ ಕಂಡಿದೆ. ಬೋನ್ ಲೆಸ್ ಚಿಕನ್ ದರ ಕೂಡ ಹೆಚ್ಚಾಗಿದ್ದು, ನಾಟಿ ಕೋಳಿ ದರ ಕೇಜಿಗೆ 600 ರಿಂದ 700 ರೂ. ವರೆಗೆ ಇದೆ. ಕುರಿ ಮಾಂಸದ ದರ ಕೆಜಿಗೆ 700 ರೂ.ಗೆತಲುಪಿದ್ದು, ಸ್ಪೆಷಲ್ ಕುರಿ ಮಟನ್ ಕೆಜಿಗೆ 800 ರೂ. ವರೆಗೆ ಮಾರಾಟವಾಗುತ್ತಿದೆ. ಕಾಳು ಮೆಣಸು ದರ ಕೂಡ ಹೆಚ್ಚಾಗಿದ್ದು ಕೆಜಿಗೆ 750 ರಿಂದ 850 ರೂ., ಬ್ಯಾಡಗಿ ಮೆಣಸಿನಕಾಯಿ 280 ರೂ. ವರೆಗೆ ಮಾರಾಟವಾಗಿದೆ.