ಬೆಂಗಳೂರು: ಗಗನಕ್ಕೇರಿದ್ದ ಅಕ್ಕಿದರ ಸ್ವಲ್ಪ ಇಳಿಕೆ ಕಂಡಿದೆ. ಸ್ಟೀಮ್ ರೈಸ್ ಅಕ್ಕಿದರ ಕಡಿಮೆಯಾಗಿದೆ. ಬೇಡಿಕೆಯ ರಾ ರೈಸ್ ದರ ಯಥಾ ಸ್ಥಿತಿಯಲ್ಲಿ ಮುಂದುವರೆದಿದೆ.
ಬೇಸಿಗೆ ಬೆಳೆ ಬಂದಿರುವುದರಿಂದ ಅಕ್ಕಿದರ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ಸ್ಟೀಮ್ ರೈಸ್ ದರ ತಗ್ಗಿದರೂ ಅದನ್ನು ಎಲ್ಲರೂ ಬಳಸುವುದಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಹೋಟೆಲ್ ನವರು ಸ್ಟೀಮ್ ರೈಸ್ ಬಳಸುತ್ತಾರೆ. ಇದರ ಬೆಲೆ ಇಳಿಕೆ ತಾತ್ಕಾಲಿಕವೆಂದು ಹೇಳಲಾಗಿದೆ.
ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣದಿಂದ ಹೊಸ ಭತ್ತ ಬಂದಿದೆ. ಕರ್ನಾಟಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಉತ್ಪಾದನೆಯಾಗಿದ್ದು, ಭಾರತ್ ರೈಸ್ ಮಾರುಕಟ್ಟೆಯಲ್ಲಿ ಸಿಗುತ್ತಿದೆ. ಅಲ್ಲದೆ, ಅಕ್ಕಿ ದಾಸ್ತಾನಿನ ಮೇಲೆ ಕೇಂದ್ರ ಸರ್ಕಾರ ಕಣ್ಣಿಟ್ಟಿದೆ. ಇವೆಲ್ಲ ಕಾರಣಗಳಿಂದ ಅಕ್ಕಿ ದರ ಕೊಂಚ ಕಡಿಮೆಯಾಗಿದೆ.
ಸ್ಟೀಮ್ ರೈಸ್ ದರ ಕೆಜಿಗೆ 8 ರೂಪಾಯಿವರೆಗೆ ಕಡಿಮೆಯಾಗಿದೆ. ಕಳೆದ ಫೆಬ್ರವರಿಯಲ್ಲಿ ಆರ್.ಎನ್.ಆರ್. ಸ್ಟೀಮ್ ರೈಸ್ ದರ ಕೆಜಿಗೆ 57 -58 ರೂ. ಇತ್ತು. ಈಗ 48 -49 ರೂಪಾಯಿ ಇದೆ. ಸೋನಾ ಸ್ಟೀಮ್ ರೈಸ್ ದರ ಕೆಜಿಗೆ 56 ರೂ. ನಿಂದ 47 ರೂ.ಗೆ ಇಳಿಕೆಯಾಗಿದೆ. ರಾ ರೈಸ್ ದರ 55 -57 ರೂ. ಇದೆ.