ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಐದು ಕೆಜಿ ಅಕ್ಕಿ ಬದಲಿಗೆ ಪಡಿತರ ಚೀಟಿದಾರರ ಖಾತೆಗೆ ಈ ತಿಂಗಳು ಹಣ ಜಮಾ ಮಾಡಲಾಗುವುದು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ 5 ಕೆ.ಜಿ ಅಕ್ಕಿ ಬದಲಿಗೆ ಪ್ರತಿ ಕೆಜಿಗೆ 34 ರೂಪಾಯಿಯಂತೆ ಒಟ್ಟು 170 ರೂಪಾಯಿಗಳನ್ನು ಫಲಾನುಭವಿಗಳ ಖಾತೆಗೆ ಪಾವತಿಸುವುದನ್ನು ಮುಂದುವರೆಸಿದೆ. ಸೆಪ್ಟೆಂಬರ್ ತಿಂಗಳ ಹೆಚ್ಚುವರಿ ಅಕ್ಕಿ ಬದಲಿಗೆ ಇದುವರೆಗೆ 14 ಜಿಲ್ಲೆಗಳ 41.23 ಲಕ್ಷ ಪಡಿತರ ಚೀಟಿದಾರರಿಗೆ 240 ಕೋಟಿ ರೂಪಾಯಿ ಪಾವತಿಸಲಾಗಿದೆ.
ಡಿಬಿಟಿ ಮೂಲಕ ಪಡಿತರ ಚೀಟಿದಾರರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಚಿತ್ರದುರ್ಗ, ಚಾಮರಾಜನಗರ, ದಾವಣಗೆರೆ, ದಕ್ಷಿಣ ಕನ್ನಡ, ಧಾರವಾಡ, ರಾಯಚೂರು, ಮಂಡ್ಯ, ಕಲಬುರಗಿ, ಶಿವಮೊಗ್ಗ, ರಾಮನಗರ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸೆಪ್ಟಂಬರ್ ತಿಂಗಳ ಹಣ ಪಾವತಿಸಲಾಗಿದೆ.