ಬೆಂಗಳೂರು: ಅಕ್ಟೋಬರ್ ನಲ್ಲಿ ಅನ್ನಭಾಗ್ಯ ಯೋಜನೆಗೆ ಅಕ್ಕಿ ಸಿಗುವುದು ಅನುಮಾನವಾಗಿದ್ದು, 5 ಕೆಜಿ ಅಕ್ಕಿ ಬದಲಾಗಿ ನಗದು ವಿತರಣೆ ಮುಂದುವರೆಸಲಾಗುವುದು.
ಅಕ್ಕಿ ಖರೀದಿಗೆ ಸರ್ಕಾರ ಪ್ರಯತ್ನ ನಡೆಸಿದೆ. ಫಲಾನುಭವಿಗಳಿಗೆ ಅಕ್ಟೋಬರ್ ತಿಂಗಳಲ್ಲಿ 10 ಕೆಜಿ ಆಹಾರ ಧಾನ್ಯ ಸಿಗುವುದು ಅನುಮಾನವಾಗಿದ್ದು, ಐದು ಕೆಜಿ ಅಕ್ಕಿ ಬದಲಿಗೆ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸಂದಾಯ ಮಾಡುವುದನ್ನು ಮುಂದುವರಿಸಲಾಗುವುದು.
ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆ ಅಡಿ ಫಲಾನುಭವಿಗಳಿಗೆ 10 ಕೆಜಿ ಅಕ್ಕಿ ಕೊಡಲು ಪ್ರಯತ್ನ ನಡೆಸಿದ್ದು, ಅಕ್ಕಿ ಖರೀದಿಗೆ ನಡೆಸಿದ ಪ್ರಯತ್ನ ಸಫಲವಾಗಿಲ್ಲ. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ಅವರು ಗುರುವಾರ ಅಕ್ಟೋಬರ್ ನಿಂದಲೇ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದರು. ಇನ್ನು ಅಕ್ಕಿ ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ನಗದು ವಿತರಣೆ ಮುಂದುವರೆಸಲಾಗುವುದು.
ಅಂತ್ಯೋದಯ, ಬಿಪಿಎಲ್ ಕಾರ್ಡುಗಳ 1.03 ಕೋಟಿ ಪಡಿತರ ಚೀಟಿದಾರರಿದ್ದು, 3.69 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಪ್ರತಿ ತಿಂಗಳು 5 ಕೆಜಿ ಅಕ್ಕಿಗೆ 605 ಕೋಟಿ ರೂ. ಹಣ ಡಿಬಿಟಿ ಮೂಲಕ ಸಂದಾಯ ಮಾಡಲಾಗುತ್ತದೆ. ಜುಲೈ, ಆಗಸ್ಟ್ ತಿಂಗಳಲ್ಲಿ ಫಲಾನುಭವಿಗಳ ಖಾತೆಗೆ ಹಣ ಸಂದಾಯ ಮಾಡಿದ್ದು, ಸೆಪ್ಟಂಬರ್ ತಿಂಗಳು ಪೂರ್ಣಗೊಂಡರೂ ಖಾತೆಗೆ ಹಣ ಜಮಾ ಆಗಿಲ್ಲ ಎನ್ನಲಾಗಿದೆ.