ಶಿವಮೊಗ್ಗ: ದೇಶದ ಮಕ್ಕಳಲ್ಲಿ ರಕ್ತಹೀನತೆ ಮತ್ತು ಅಪೌಷ್ಠಿಕತೆ ಸಮಸ್ಯೆ ಹೆಚ್ಚಿದ್ದು, ಇದನ್ನು ನಿವಾರಿಸುವ ನಿಟ್ಟಿನಲ್ಲಿ ಭಾರತ ಸರ್ಕಾರವು ಆರಂಭಿಸಿರುವ ಅಕ್ಷರ ದಾಸೋಹ ಕಾರ್ಯಕ್ರಮದಲ್ಲಿ 1 ರಿಂದ 8 ನೇ ತರಗತಿ ಮಕ್ಕಳಿಗೆ ಉಚಿತ ಸಾರವರ್ಧಿತ ಅಕ್ಕಿಯನ್ನು ಪೂರೈಕೆ ಮಾಡುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಯ್ಯ ಟಿ.ಎನ್. ಸ್ಪಷ್ಟನೆ ನೀಡಿದ್ದಾರೆ.
ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಿಸಲು ಬಿಸಿಯೂಟದ ಅಕ್ಕಿಯಲ್ಲಿ ಶೇ. 10 ರಷ್ಟು ಸಾರವರ್ಧಿತ ಅಕ್ಕಿಯನ್ನು ಬೆರೆಸಲಾಗುತ್ತಿದೆ. ಸಾರವರ್ಧಿತ ಅಕ್ಕಿಯಲ್ಲಿ ಐರನ್, ಜ್ಹಿಂಕ್, ಪೋಲಿಕ್ ಆಸಿಡ್, ವಿಟಮಿನ್ ಬಿ12 ಮತ್ತು ವಿಟಮಿನ್ ಎ ಮೊದಲಾದ ಪೋಷಕಾಂಶಗಳನ್ನು ಅಡಕಗೊಳಿಸಲಾಗಿದೆ. ಸಾರವರ್ಧಿತ ಅಕ್ಕಿಯಲ್ಲಿ ರೂಪ, ರುಚಿ ಮತ್ತು ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಅಕ್ಕಿ ತೊಳೆಯುವುದರಿಂದಾಗಲೀ, ಕುದಿಸುವುದರಿಂದಾಗಲೀ ಯಾವುದೇ ರೀತಿಯ ಪೋಷಕಾಂಶಗಳು ಹಾಳಾಗುವುದಿಲ್ಲ. ಕೇಂದ್ರ ಸರ್ಕಾರವು ಈ ಅಕ್ಕಿಯನ್ನು ಭಾರತ ಆಹಾರ ನಿಗಮದ ಮೂಲಕ ಬಿಸಿಯೂಟದ ಕೇಂದ್ರಗಳಿಗೆ ಪೂರೈಸುತ್ತಿದೆ. ಯಾವುದೇ ಆತಂಕವಿಲ್ಲದೇ ಬಿಸಿಯೂಟಕ್ಕೆ ಬಳಸಬಹುದೆಂದು ಅವರು ಸ್ಪಷ್ಟನೆ ನೀಡಿದ್ದಾರೆ.