ತುಮಕೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಅಕ್ಕಿ ಕೊರತೆ ಎದುರಾಗಿದ್ದರಿಂದ ಸಿದ್ದಗಂಗಾ ಮಠದಿಂದ ಅಕ್ಕಿ ಸಾಲ ಪಡೆಯಲಾಗಿದೆ.
ತುಮಕೂರು ತಾಲೂಕಿನ 17 ವಿದ್ಯಾರ್ಥಿ ನಿಲಯಗಳಲ್ಲಿ ಅಕ್ಕಿ ಖಾಲಿಯಾಗಿದ್ದರಿಂದ ಇಲಾಖೆಯ ಅಧಿಕಾರಿಗಳು ಕಳೆದ ಡಿಸೆಂಬರ್ ನಲ್ಲಿ 120 ಕ್ವಿಂಟಲ್ ಅಕ್ಕಿಯನ್ನು ಸಿದ್ಧಗಂಗಾ ಮಠದಿಂದ ಸಾಲವಾಗಿ ಪಡೆದಿದ್ದಾರೆ. ಅಕ್ಟೋಬರ್ ನಲ್ಲಿ ತುಮಕೂರು ಜಿಲ್ಲೆಗೆ ಬರಬೇಕಿದ್ದ ಅಕ್ಕಿ ಜನವರಿಯಲ್ಲಿ ಬಂದಿದೆ. ತುಮಕೂರು ತಾಲೂಕು ಹೊರತುಪಡಿಸಿ ಉಳಿದ ಹಾಸ್ಟೆಲ್ ಗಳಿಗೆ ಅಕ್ಕಿ ಪೂರೈಕೆ ಮಾಡಲಾಗಿದ್ದು, ಅಕ್ಟೋಬರ್ ನಿಂದ ಮಾರ್ಚ್ ಅವಧಿಗೆ ಅಕ್ಕಿಯನ್ನು ಒಮ್ಮೆಲೇ ಎತ್ತುವಳಿ ಮಾಡಬೇಕಿತ್ತು. ಈ ಬಾರಿ ಫೆಬ್ರವರಿ ಕಳೆದರೂ ಅಕ್ಕಿ ಎತ್ತುವಳಿಯಾಗಿಲ್ಲ. ಹೀಗಾಗಿ ಅಕ್ಕಿ ಕೊರತೆ ಎದುರಾಗಿದೆ. ತಾಲೂಕಿನ 17 ಹಾಸ್ಟೆಲ್ ಗಳಲ್ಲಿ 2000ಕ್ಕೂ ಹೆಚ್ಚು ಮಕ್ಕಳಿದ್ದು, ಪ್ರಸ್ತುತ ಮಠದ ಅಕ್ಕಿ ಬಳಸಿ ತಯಾರಿಸಿದ ಆಹಾರವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ.