ಬೆಂಗಳೂರು: ವಾಣಿಜ್ಯ ಕೈಗಾರಿಕೆಗಳ ವಿದ್ಯುತ್ ದರ ಭಾರಿ ಏರಿಕೆಯಾಗಿದ್ದು, ಮಿಲ್ಲಿಂಗ್ ದರ ಏರಿಕೆಗೆ ಅಕ್ಕಿ ಗಿರಣಿಗಳು ಸಜ್ಜಾಗಿವೆ. ಇದರಿಂದ ಅಕ್ಕಿ ದರ ಕ್ವಿಂಟಾಲ್ ಗೆ 150 -200 ರೂ.ವರೆಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ವಾಣಿಜ್ಯ ವಿದ್ಯುತ್ ದರ ಏಕಾಏಕಿ ಶೇಕಡ 40ಕ್ಕಿಂತ ಅಧಿಕ ಹೆಚ್ಚಳ ಮಾಡಲಾಗಿದೆ. ಈ ಹಿಂದೆ ಎರಡು ವರ್ಷಗಳಿಗೊಮ್ಮೆ ವಿದ್ಯುತ್ ಕನಿಷ್ಠ ಶುಲ್ಕವನ್ನು 10 ರಿಂದ 20 ರೂ. ಮಾತ್ರ ಹೆಚ್ಚಳ ಮಾಡಲಾಗುತ್ತಿತ್ತು. ಈಗ ಒಂದು ಕೆವಿ ವಿದ್ಯುತ್ ಪೂರೈಕೆಗೆ 80 ರಿಂದ 85 ರೂ. ಹೆಚ್ಚಳ ಮಾಡಲಾಗಿದೆ.
ಪ್ರತಿ ಕ್ವಿಂಟಲ್ ಭತ್ತವನ್ನು ಮಿಲ್ಲಿಂಗ್ ಮಾಡಲು 100 ರಿಂದ 110 ರೂ. ಪಡೆಯುತ್ತಿದ್ದು, ವಿದ್ಯುತ್ ಪೂರೈಕೆ ಕನಿಷ್ಠ ಶುಲ್ಕ ಹೆಚ್ಚಳ ಮಾಡಿರುವುದರಿಂದ ಗಿರಣಿ ಮಾಲೀಕರಿಗೆ ಹೊರೆಯಾಗಿ ಪರಿಣಮಿಸಿದೆ. ಹಿಂದೆ 260 ರೂ. ಇದ್ದ ಒಂದು ಕೆವಿ ವಿದ್ಯುತ್ ಬಳಕೆ ಶುಲ್ಕ ಈಗ 350 ರೂ.ಗೆ ಹೆಚ್ಚಳವಾಗಿದೆ. ವಿದ್ಯುತ್ ದರ ಅವೈಜ್ಞಾನಿಕ ಹೆಚ್ಚಳದಿಂದ ಭತ್ತದ ಮಿಲ್ಲಿಂಗ್ ದರ ಹೆಚ್ಚಳ ಮಾಡಲು ಗಿರಣಿಗಳ ಮಾಲೀಕರು ಮುಂದಾಗಿದ್ದಾರೆ.