ಬೆಂಗಳೂರು: ಅನ್ನಭಾಗ್ಯ ಯೋಜನೆ ಅಡಿ ಪಡಿತರ ಚೀಟಿದಾರರಿಗೆ 5 ಕೆಜಿ ಅಕ್ಕಿ ಬದಲು ಹಣ ನೀಡಲು ಮುಂದಾದ ಸರ್ಕಾರದ ಕ್ರಮಕ್ಕೆ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಫಲಾನುಭವಿಗಳಿಗೆ ಈ ತಿಂಗಳ ಪಡಿತರ ಆಹಾರ ಧಾನ್ಯ ವಿತರಿಸದಿರಲು ಪಡಿತರ ವಿತರಕರು ತೀರ್ಮಾನ ಕೈಗೊಂಡಿದ್ದಾರೆ. ಪಡಿತರ ವಿತರಕರು ಅಕ್ಕಿ ಬದಲು ಹಣ ನೀಡುವುದರಿಂದ ಕಮಿಷನ್ ನಷ್ಟವಾಗುತ್ತದೆ ಎಂದು ಹೇಳಿದ್ದು, ಹಣದ ಬದಲು ಅಕ್ಕಿ ಅಥವಾ ಬೇರೆ ಧಾನ್ಯ ವಿತರಿಸಬೇಕು. ಇದರಿಂದ ವಿತರಕರಿಗೆ ಕಮಿಷನ್ ಸಿಗುತ್ತದೆ ಸಾಗಾಣೆ ವೆಚ್ಚ, ಹಮಾಲರಿಗೂ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.
ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ. ಕೃಷ್ಣಪ್ಪ ಈ ಕುರಿತು ಮಾಹಿತಿ ನೀಡಿದ್ದು, ಎರಡು ದಿನಗಳಲ್ಲಿ ಸಭೆ ನಡೆಸಿ ಪ್ರತಿಭಟನೆಯ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಅಕ್ಕಿ ಬದಲಿಗೆ ಹಣ ನೀಡಿರುವ ಸರ್ಕಾರದ ಕ್ರಮದಿಂದ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ನಷ್ಟವಾಗುತ್ತದೆ. ಜುಲೈ 4ರಂದು ಪಡಿತರ ವಿತರಕರ ಸಭೆ ನಡೆಸಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಈ ಹಿಂದೆ ಪ್ರತಿ ಫಲಾನುಭವಿಗೆ 6 ಕೆಜಿ ಅಕ್ಕಿ ನೀಡಲಾಗುತ್ತಿತ್ತು. ಜೂನ್ ನಿಂದ 5 ಕೆಜಿ ಮಾತ್ರ ವಿತರಿಸಲಾಗುತ್ತಿದ್ದು, ಒಂದು ಕೆಜಿ ಅಕ್ಕಿ ಕಮಿಷನ್ ಸಿಗದಂತಾಗಿದೆ. ಈಗ 5 ಕೆಜಿ ಅಕ್ಕಿ ಬದಲಿಗೆ ಹಣ ನೀಡಲು ಮುಂದಾಗಿದ್ದು, ಕಮಿಷನ್ ಗೆ ಕತ್ತರಿ ಬೀಳಲಿದೆ. ಅಕ್ಕಿ ಸಿಗದಿದ್ದಲ್ಲಿ ರಾಗಿ, ಜೋಳ, ಸಕ್ಕರೆ, ಬೆಲ್ಲ, ಉಪ್ಪು ಸೇರಿ ಇತರೆ ಪದಾರ್ಥಗಳನ್ನು ಹಂಚಿಕೆ ಮಾಡಬಹುದಾಗಿದೆ. ಸರ್ಕಾರಕ್ಕೂ ಹೊರೆ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.