ಬೆಂಗಳೂರು: ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 150ಕ್ಕೂ ಅಧಿಕ ತಾಲೂಕುಗಳನ್ನು ಬರ ಪೀಡಿತ ಎಂದು ಸರ್ಕಾರ ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಪರಿಹಾರ ಜೊತೆಗೆ ಅನ್ನ ಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ವಿತರಣೆ ಬಗ್ಗೆ ಚಿಂತನೆ ನಡೆದಿದೆ.
ಬರಪೀಡಿತ ತಾಲೂಕುಗಳು ಎಂದು ಘೋಷಿಸಲಾದ ತಾಲೂಕುಗಳಲ್ಲಿ ನಗದು ನೀಡುವ ಬದಲಿಗೆ ಹೆಚ್ಚುವರಿಯಾಗಿ ತಲಾ 5 ಕೆಜಿ ಅಕ್ಕಿ ವಿತರಿಸಲು ಚಿಂತನೆ ನಡೆದಿದೆ. ಈ ಹಿಂದೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದ್ದರು. ಈಗ ಬರ ಘೋಷಣೆಯ ಮಾಡಲಾಗಿದೆ. 161 ತಾಲೂಕುಗಳಲ್ಲಿ ತೀವ್ರ ಬರ, 34 ತಾಲ್ಲೂಕುಗಳಲ್ಲಿ ಸಾಧಾರಣ ಬರ ಇದೆ ಎಂದು ಸರ್ಕಾರ ಘೋಷಣೆ ಮಾಡಿದೆ.
ಬರಪೀಡಿತ ತಾಲೂಕುಗಳಿಗೆ ಹಣದ ಬದಲು ಅಕ್ಕಿ ಪೂರೈಕೆಯ ಚಿಂತನೆ ನಡೆದಿದೆ. ಎಲ್ಲ ಬಿಪಿಎಲ್ ಪಡಿತರ ಕಾರ್ಡ್ ದಾರರಿಗೆ ಹೆಚ್ಚುವರಿ 5 ಕೆಜಿ ಅಕ್ಕಿ ವಿತರಿಸಲು ಮಾಸಿಕ 2.29 ಲಕ್ಷ ಟನ್ ಅಕ್ಕಿ ಬೇಕಾಗುತ್ತದೆ. ತೀವ್ರ ಬರ ಪೀಡಿತ ತಾಲೂಕುಗಳಿಗೆ ಮಾತ್ರ ಹೆಚ್ಚುವರಿ ಅಕ್ಕಿ ನೀಡಿದಲ್ಲಿ 1.40 ಲಕ್ಷ ಟನ್ ಅಕ್ಕಿ ಬೇಕಾಗುತ್ತದೆ.
ಅಕ್ಕಿ ಖರೀದಿಗೆ ಆಂಧ್ರ ಮತ್ತು ತೆಲಂಗಾಣ ಸರ್ಕಾರಗಳೊಂದಿಗೆ ಚರ್ಚೆ ನಡೆದಿದೆ. ಮುಖ್ಯಮಂತ್ರಿಗಳ ಮುಂದೆ ಪ್ರಸ್ತಾವ ಸಲ್ಲಿಸಿ ಒಪ್ಪಿಗೆ ಪಡೆದ ನಂತರ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವ ಮುನಿಯಪ್ಪ ತಿಳಿಸಿದ್ದಾರೆ.
ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದ್ದು, ಆಧಾರ್ ಜೋಡಣೆ, ಬ್ಯಾಂಕ್ ಖಾತೆಗೆ ಜೋಡಣೆ, ಬ್ಯಾಂಕ್ ಖಾತೆ ತೆರೆದು ಹಣ ಜಮಾ ಮಾಡುವ ಪ್ರಕ್ರಿಯೆ ನಡೆದಿದೆ. ಹೊಸದಾಗಿ ಬಿಪಿಎಲ್ ಕಾರ್ಡ್ ವಿತರಣೆ ಮಾಡುವ ಬಗ್ಗೆ ತೀರ್ಮಾನವಾಗಿಲ್ಲ ಎಂದು ಹೇಳಿದ್ದಾರೆ.