ನವದೆಹಲಿ: ಕೇಂದ್ರ ಸರ್ಕಾರದಿಂದ ಪರಿಷ್ಕೃತ ಆಯುಷ್ಮಾನ್ ಯೋಜನೆ ಜಾರಿಗೆ ತಂದಿದ್ದು, 70 ವರ್ಷ ಮೇಲ್ಪಟ್ಟವರಿಗೂ ಆಯುಷ್ಮಾನ್ ಭಾರತ್ ಯೋಜನೆ ಅನ್ವಯವಾಗಲಿದೆ. ನೋಂದಣಿ ಪ್ರಕ್ರಿಯೆ ಆರಂಭಿಸುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. 70 ವರ್ಷ ಮೇಲ್ಪಟ್ಟ ಹಿರಿಯರಿಗೆ 5 ಲಕ್ಷ ರೂಪಾಯಿವರೆಗೆ ಉಚಿತ ಚಿಕಿತ್ಸೆ ನೀಡಲಾಗುವುದು. ಜೊತೆಗೆ ಈ ಯೋಜನೆ ಅಡಿ ಪ್ರತ್ಯೇಕ ವಿಮಾ ಸೌಲಭ್ಯ ಸಿಗಲಿದೆ.
ಅರ್ಹರನ್ನು ಯೋಜನೆಗೆ ನೋಂದಾಯಿಸಿಕೊಳ್ಳುವಂತೆ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ. ಆಯುಷ್ಮಾನ್ ಆ್ಯಪ್ ಹಾಗೂ beneficiary.nha.gov.in ವೆಬ್ ಪೋರ್ಟಲ್ ನಲ್ಲಿ ಬದಲಾವಣೆ ಮಾಡಿ 70 ವರ್ಷ ಹಾಗೂ 70 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಪ್ರತ್ಯೇಕ ಮಾಡ್ಯೂಲ್ ನೀಡಲಾಗಿದೆ. ಅದರಲ್ಲಿ ಈ ವಯೋಮಾನದ ವೃದ್ಧರನ್ನು ನೋಂದಣಿ ಮಾಡಿಕೊಳ್ಳುವಂತೆ ಸರ್ಕಾರ ತಿಳಿಸಿದ್ದು, ಇವರಿಗೆ ಪ್ರತ್ಯೇಕ ಆಯುಷ್ಮಾನ್ ಕಾರ್ಡ್ ನೀಡಲಾಗುವುದು.
ಈಗಿನ ಕಾರ್ಡಿನಲ್ಲಿ ಸಮೂಹ ವಿಮಾ ಸೌಲಭ್ಯವಿದ್ದು, ಇಡೀ ಕುಟುಂಬಕ್ಕೆ 5 ಲಕ್ಷ ರೂ. ಲಭಿಸುತ್ತದೆ. ಈಗ ಇಡೀ ಕುಟುಂಬ ಪೂರ್ತಿ 5 ಲಕ್ಷ ರೂ. ವಿಮೆ ಹಣ ಖರ್ಚು ಮಾಡಿದ್ದರೂ ಹಿರಿಯರಿಗೆ ಪ್ರತ್ಯೇಕವಾಗಿ 5 ಲಕ್ಷ ರೂ. ವಿಮೆ ಲಭಿಸುತ್ತದೆ. ಈಗಾಗಲೇ ಈ ಹಿರಿಯರು ಪ್ರತ್ಯೇಕ ರಾಜ್ಯ ಸರ್ಕಾರಿ ವಿಮೆ ಹೊಂದಿದ್ದರೆ ಅವರು ಆಯುಷ್ಮಾನ್ ಅಥವಾ ರಾಜ್ಯ ಸರ್ಕಾರಿ ವಿಮೆ ಆಯ್ಕೆ ಮಾಡಿಕೊಳ್ಳಬೇಕು. ಎರಡನ್ನೂ ಪಡೆದುಕೊಳ್ಳಲು ಅವಕಾಶವಿರುವುದಿಲ್ಲ. ಆದರೆ, ಖಾಸಗಿ ಆರೋಗ್ಯ ವಿಮೆ ಹೊಂದಿದ್ದರೆ ಅವರಿಗೆ ಈ ಷರತ್ತು ಅನ್ವಯಿಸುವುದಿಲ್ಲ. ಆಯುಷ್ಮಾನ್ ಕಾರ್ಡನ್ನು ಪಡೆದುಕೊಳ್ಳಬಹುದು ಎಂದು ಹೇಳಲಾಗಿದೆ.