ಬೆಂಗಳೂರು: ಟೆಂಡರ್ ಮೂಲಕ ಔಷಧಗಳ ಖರೀದಿ ಮತ್ತು ಎಂಪ್ಯಾನಲ್ಡ್ ಪ್ರಯೋಗಾಲಯಗಳಲ್ಲಿ ಔಷಧಗಳ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸುವಾಗ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದಲ್ಲಿ ಆಗಿರುವ ಲೋಪಗಳ ಕುರಿತು ಪರಿಶೀಲಿಸಿ ವರದಿ ನೀಡಲು ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಎಂ. ಕನಗವಲ್ಲಿ ನೇತೃತ್ವದ ಪರಿಶೀಲನಾ ತಂಡ ರಚಿಸಲಾಗಿದೆ.
ತಂಡದಲ್ಲಿ ಔಷಧ ನಿಯಂತ್ರಣ ಇಲಾಖೆ ಕೇಂದ್ರ ಕಚೇರಿಯ ಸಹಾಯಕ ಔಷಧ ನಿಯಂತ್ರಕ ವೆಂಕಟೇಶ್, ಬೆಂಗಳೂರು ಮೆಡಿಕಲ್ ಕಾಲೇಜಿನ ಮೈಕ್ರೋ ಬಯಾಲಜಿ ಡಾ. ಅಸಿಮಾ ಬಾನು, ರಾಜೀವ್ ಗಾಂಧಿ ಆರೋಗ್ಯ ವಿವಿ ಕುಲಪತಿಯಿಂದ ನಾಮ ನಿರ್ದೇಶಕರಾದ ಹಿರಿಯ ಫಾರ್ಮಾಲಜಿ ಪ್ರಾಧ್ಯಾಪಕರು ಇರುತ್ತಾರೆ.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾದ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯ ಸಮಿತಿಗೆ ಐದು ದಿನದಲ್ಲಿ ವರದಿ ಸಲ್ಲಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಬಳ್ಳಾರಿಯಲ್ಲಿ ಬಾಣಂತಿಯರ ಸಾವಿನ ಪ್ರಕರಣದಲ್ಲಿ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಅಧಿಕಾರಿಗಳ ಪಾತ್ರ ಮತ್ತು ಲೋಪ ಎಸಗಿದ ಅಧಿಕಾರಿಗಳ ಮೇಲೆ ಜವಾಬ್ದಾರಿ ನಿಗದಿಪಡಿಸುವ ಕುರಿತು ಹಾಗೂ ವ್ಯವಸ್ಥೆಗಳ ಬಗ್ಗೆ ಈ ತಂಡ ಪರಿಶೀಲನೆ ನಡೆಸಲಿದೆ.