ಬೆಂಗಳೂರು: ಕಂದಾಯ ಬಡಾವಣೆಗಳಿಗೆ ನಿರ್ಬಂಧ ಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸೋಮವಾರ ಕಂದಾಯ ಇಲಾಖೆ ಸಭೆ ನಡೆಸಿದ ಸಿಎಂ, ಇನ್ನು ಮುಂದೆ ಕಂದಾಯ ಜಮೀನಿನಲ್ಲಿ ಬಡಾವಣೆ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ. ಇದನ್ನು ತಡೆಯಲು ಕ್ರಮ ಕೈಗೊಳ್ಳಬೇಕು. ಮಾತ್ರವಲ್ಲದೆ, ಈಗಾಗಲೇ ಇರುವ ಬಡಾವಣೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಕಂದಾಯ ಇಲಾಖೆಯಲ್ಲಿ ಯಾವ ಯಾವ ಸರ್ವೇ ನಂಬರ್ ಗಳಲ್ಲಿ ಅನಧಿಕೃತ ಬಡಾವಣೆ ನಿರ್ಮಿಸಲಾಗಿದೆ. ನಿವೇಶನಗಳ ದತ್ತಾಂಶ ಇದೆ ಎನ್ನುವ ಮಾಹಿತಿ ಆಧರಿಸಿ ಒಂದೇ ಯೋಜನೆಯಲ್ಲಿ ಅಂತಹ ಸ್ವತ್ತುಗಳಿಗೆ ಖಾತಾ ದಾಖಲೆ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಬೇಕು ಎಂದು ಹೇಳಿದ್ದಾರೆ.
ಸ್ಥಳೀಯ ಸಂಸ್ಥೆಗಳಲ್ಲಿ 30 ಲಕ್ಷ ಆಸ್ತಿಗಳಿಗೆ ಖಾತೆಗಳಿಲ್ಲ. ಗ್ರಾಮ ಪಂಚಾಯಿತಿಗಳಲ್ಲಿ ಸುಮಾರು 90 ಲಕ್ಷ ಆಸ್ತಿಗಳಿಗೆ ಖಾತಾ ದಾಖಲೆಗಳಿಲ್ಲ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಖಾತೆ ನೋಂದಣಿ ಪ್ರಕ್ರಿಯೆ ಸರಳಗೊಳಿಸುವ ಕುರಿತು ಕ್ರಮ ಕೈಗೊಳ್ಳಬೇಕು. ಖಾತೆ ಇಲ್ಲದೆ ನಕಲಿ ದಾಖಲೆ ಸೃಷ್ಟಿಸಿ ನೋಂದಣಿ ನಡೆಯುತ್ತಿದ್ದು, ಇಂತಹ ಪ್ರಕ್ರಿಯೆಗೆ ಕಡಿವಾಣ ಹಾಕಬೇಕೆಂದು ಹೇಳಿದ್ದಾರೆ.
ಕಂದಾಯ ಬಡಾವಣೆಗಳಿಗೆ ಈ ಮೊದಲು ಕಡಿವಾಣ ಹಾಕುವ ಬದಲು ಸ್ಥಿರಾಸ್ತಿ ನೋಂದಣಿಗೆ ಇ-ಖಾತಾ ಕಡ್ಡಾಯ ಮಾಡಿದ ಪರಿಣಾಮ ಜನಸಾಮಾನ್ಯರಿಗೆ ತೊಂದರೆಯಾಗಿತ್ತು. ರೆವಿನ್ಯೂ ಸೈಟು ಖರೀದಿಸಿದವರಿಗೆ ಇ- ಖಾತಾ ಸಿಗದ ಪರಿಣಾಮ ಬ್ಯಾಂಕ್ ಲೋನ್ ಸಿಗದೇ ಸೈಟು ಮಾರಾಟಕ್ಕೂ ಸಮಸ್ಯೆಯಾಗಿತ್ತು.
ನಗರ, ಪಟ್ಟಣ, ಹಳ್ಳಿಗಳ ಸಮೀಪದಲ್ಲಿ ಅಕ್ರಮವಾಗಿ ರೆವಿನ್ಯೂ ಲೇಔಟ್ ಗಳು ನಿರ್ಮಾಣವಾಗಿವೆ. ಅನೇಕರು ನಿವೇಶನ ಖರೀದಿಸಿದ್ದಾರೆ. ಇಂತಹ ಸ್ವತ್ತುಗಳಿಗೆ ಖಾತಾ ದಾಖಲೆಗಳನ್ನು ನೀಡುವ ಪ್ರಕ್ರಿಯೆಗೆ ಚಾಲನೆ ನೀಡಬೇಕೆಂದು ಸಿಎಂ ಸೂಚನೆ ನೀಡಿದ್ದಾರೆ.