ಬೆಳಗಾವಿ(ಸುವರ್ಣಸೌಧ): ಅನಧಿಕೃತ ಬಡಾವಣೆಗಳಿಗೆ ಕಡಿವಾಣ ಹಾಕಲು ಈಗಾಗಲೇ ಆದೇಶ ನೀಡಿರುವಂತೆ ರೆವಿನ್ಯೂ ಸೈಟುಗಳ ನೋಂದಣಿ ರದ್ದು ಕ್ರಮವನ್ನು ಮತ್ತಷ್ಟು ಬಿಗಿಗೊಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಅನಧಿಕೃತ ಬಡಾವಣೆಗಳ ನಿಯಂತ್ರಣ ಮತ್ತು ಕಂದಾಯ ನಿವೇಶನಗಳ ನೋಂದಣಿ ತಡೆಗೆ ತಂಡ ರಚಿಸುವುದಾಗಿ ಅವರು ಹೇಳಿದ್ದಾರೆ.
ಬೆಂಗಳೂರು ನಗರದಲ್ಲಿ 20 ಅಡಿ, 15 ಅಡಿ ರಸ್ತೆ ಮಾಡಿ ಬಡಾವಣೆ ನಿರ್ಮಿಸುತ್ತಿದ್ದು, ಇದರಿಂದ ಹೊಸ ಸ್ಲಂಗಳು ಸೃಷ್ಟಿಯಾಗುತ್ತಿವೆ. ಇನ್ನು ಮುಂದೆ ಸರ್ಕಾರದಿಂದ ಬಡವರಿಗೆ 15X20, 20X30 ನಿವೇಶನ ಹಂಚುವುದು ಬೇಡ, 30X40 ಚದರಡಿ ವಿಸ್ತೀರ್ಣದ ನಿವೇಶನಗಳನ್ನು ಕೊಡಬೇಕು ಎಂದು ಸೂಚನೆ ನೀಡಲಾಗಿದೆ. ಎಂದು ಹೇಳಿದ್ದಾರೆ.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ನಗರ ಯೋಜನಾ ಪ್ರದೇಶಗಳಲ್ಲಿ ನಿಯಮಾವಳಿಯಂತೆ ಅನುಮೋದನೆ ಪಡೆಯದೆ ನಿರ್ಮಿಸಿದ ಬಡಾವಣೆಯ ನಿವೇಶನಗಳಿಗೆ ಸ್ಥಳೀಯ ಪ್ರಾಧಿಕಾರದಿಂದ ಕ್ರಮವಾಗಿ ಖಾತೆ ನೀಡಿದ್ದಲ್ಲಿ ಅಂತಹ ಸ್ವತ್ತಿನ ಕಂದಾಯ ದಾಖಲೆ ಖಾತೆಯನ್ನು ರದ್ದುಪಡಿಸಲು ನಿರ್ದೇಶನ ನೀಡಲಾಗಿದೆ ಎಂದು ಹೇಳಿದ್ದಾರೆ.