
ಬೆಂಗಳೂರು: ರಾಜ್ಯದಲ್ಲಿ ಕಾವೇರಿ 2.0 ತಂತ್ರಾಂಶ ಚಾಲನೆಗೆ ಬಂದ ನಂತರ ಆಸ್ತಿ ನೋಂದಣಿ ಕಾರ್ಯಕ್ಕೆ ವೇಗ ದೊರೆತಿದ್ದು, ಪ್ರಸಕ್ತ ಕಾಲಮಾನದಲ್ಲಿ ಸಾಫ್ಟ್‌ವೇರ್‌ಗೆ ಸಂಬಂಧಿಸಿದಂತೆ ಉದ್ಭವಿಸುವ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ವಿಧಾನ ಮಂಡಲದ ಬಜೆಟ್ ಅಧಿವೇಶನದಲ್ಲಿ ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಕೆ. ಪ್ರತಾಪ್ ಸಿಂಹ ನಾಯಕ್ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, 2025 ನೇ ಸಾಲಿನ ಆರಂಭದಲ್ಲಿ ಕಾವೇರಿ 2.0 ತಂತ್ರಾಂಶದಲ್ಲಿ ತಾಂತ್ರಿಕ ದೋಷ ಉಂಟಾಗಿ ಸೇವೆಯಲ್ಲಿ ವ್ಯತ್ಯಯವಾಗಿತ್ತು. ಸರ್ಕಾರ ಸಮಸ್ಯೆಯನ್ನು ತುರ್ತಾಗಿ ಪರಿಹರಿಸಿದ್ದು, ಪ್ರಸ್ತುತ ಯಾವುದೇ ಸಮಸ್ಯೆಗಳಿಲ್ಲದೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದ್ದಾರೆ.
ಅಧಿಕಾರಿಗಳು, ಸಾರ್ವಜನಿಕರ ಸಲಹೆಗಳನ್ನು ಪರಿಗಣಿಸಿ ತಂತ್ರಾಂಶವನ್ನು ಮತ್ತಷ್ಟು ಬಳಕೆದಾರರ ಸ್ನೇಹಿಯಾಗಿ ರೂಪಿಸಲಾಗುತ್ತಿದೆ. ತಂತ್ರಾಂಶ ಬಳಕೆಗೆ ಅನುಕೂಲವಾಗುವಂತೆ ಸಹಾಯವಾಣಿ, ಟಿಕೆಟಿಂಗ್ ಟೂಲ್, ಸರ್ವಿಸ್ ಡೆಸ್ಕ್ ಅಪ್ಲಿಕೇಶನ್ ಸಪೋರ್ಟ್ ತರಬೇತಿ ಮೊದಲಾದ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.