ಕಾರವಾರ: ರಾಜ್ಯದಲ್ಲಿ 48 ಲಕ್ಷ ಜಮೀನುಗಳು ನಿಧನವಾಗಿರುವ ಮಾಲೀಕರ ಹೆಸರಿನಲ್ಲಿದ್ದು, ಇವೆಲ್ಲವನ್ನೂ ಪೌತಿ ಖಾತೆ ಮೂಲಕ ಸರಿಪಡಿಸುವ ಅಭಿಯಾನ ಆರಂಭಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಜಮೀನುಗಳ ವ್ಯಾಜ್ಯ ಇದ್ದಲ್ಲಿ ಇ-ಕೆವೈಸಿ ಮೂಲಕವೇ ಅರ್ಜಿ ಹಾಕಬೇಕು. ಇಲ್ಲ ಎಂದರೆ ಪೌತಿ ಖಾತೆ ಮಾಡಿಸಬೇಕು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಖಾಸಗಿ ಜಮೀನುಗಳ 4.10 ಕೋಟಿ ಮಾಲೀಕರಿದ್ದು, ಶೇಕಡ 85ರಷ್ಟು ಆಧಾರ್ ಜೋಡಣೆಯಾಗಿದೆ. ಉಳಿದ ಆಧಾರ್ ಜೋಡಣೆ ಕಾರ್ಯ ನಡೆಯುತ್ತಿದೆ. ನಕಲಿ ಖಾತೆ ತಡೆಯಲು ಇ- ಸ್ವತ್ತು ಕಡ್ಡಾಯ ಮಾಡಲಾಗಿದ್ದು, ಆಡಳಿತದಲ್ಲಿ ಪಾರದರ್ಶಕತೆ ತರಲು ಇ -ಆಫೀಸ್ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸರ್ಕಾರಿ ಜಮೀನು ಸಾಗುವಳಿದಾರರಿಗೆ ಭೂಮಿ ಮಂಜೂರಾಗಿದ್ದರೂ ದುರಸ್ತಿ ಪೋಡಿ ಆಗಿಲ್ಲ. ರಾಜ್ಯದಲ್ಲಿ 5 ಲಕ್ಷ ರೈತರ ದುರಸ್ತಿ ಪೋಡಿ ಅಭಿಯಾನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.