ಬೆಂಗಳೂರು: ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಬಳಕೆ ಮಾಡುವ ಅವಕಾಶ ಕಲ್ಪಿಸಲು ಭೂ ಪರಿವರ್ತನೆ ತಿದ್ದುಪಡಿ ಮಸೂದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ತೀರ್ಮಾನಿಸಲಾಗಿದೆ.
ಕಂದಾಯ ಸಚಿವ ಆರ್. ಅಶೋಕ್ ಈ ಬಗ್ಗೆ ಮಾಹಿತಿ ನೀಡಿದ್ದು, ಲಕ್ಷಾಂತರ ಕಂದಾಯ ನಿವೇಶನಗಳನ್ನು ಭೂ ಪರಿವರ್ತನೆ ವ್ಯಾಪ್ತಿಗೆ ತರಲು ಉದ್ದೇಶಿಸಲಾಗಿದ್ದು, ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಸೆಕ್ಷನ್ 95ಕ್ಕೆ ತಿದ್ದುಪಡಿಯಿಂದಾಗಿ ಭೂ ಪರಿವರ್ತನೆಗೆ ವಿರುದ್ಧ ಅಡ್ಡಿ ಆತಂಕಗಳು ನಿವಾರಣೆಯಾಗಲಿವೆ ಎಂದು ಹೇಳಿದ್ದಾರೆ.
ಅಧಿವೇಶನದಲ್ಲಿ ಮಸೂದೆಗೆ ಅಂಗೀಕಾರ ಪಡೆಯಲು ಸಾಧ್ಯವಾಗಿಲ್ಲದ ಕಾರಣ ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಲಾಗಿದೆ. ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಿಸಿಕೊಳ್ಳಲು ಸಲ್ಲಿಸಲಾದ ಅರ್ಜಿಗಳನ್ನು 7 ದಿನಗಳ ಒಳಗೆ ಇತ್ಯರ್ಥಪಡಿಸಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಅರ್ಜಿ ಸಲ್ಲಿಕೆಯಾದ 30 ದಿನಗಳಲ್ಲಿ ಅನುಮತಿ ನೀಡಲಾಗುವುದು ಎಂದು ಹೇಳಲಾಗಿದೆ.
ಅಕ್ರಮ ಸಕ್ರಮಕ್ಕೆ ಹೊಸ ಮಾರ್ಗ ಹುಡುಕಲಾಗಿದೆ. ರೆವಿನ್ಯೂ ಸೈಟ್ ಗಳಲ್ಲಿ ಮನೆ ನಿರ್ಮಿಸಿಕೊಂಡು ಸಕ್ರಮಕ್ಕಾಗಿ ಸುಮಾರು ಎರಡು ದಶಕಗಳಿಂದ ಕಾಯುತ್ತಿರುವ ಜನತೆಗೆ ಸಿಹಿ ಸುದ್ದಿ ನೀಡಲು ಸರ್ಕಾರ ಸಿದ್ಧತೆ ಕೈಗೊಂಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಕಂದಾಯ ಜಾಗಗಳಲ್ಲಿ ಅನಧಿಕೃತವಾಗಿ ಮನೆ, ನಿವೇಶನ ಮತ್ತಿತರ 40 ಲಕ್ಷಕ್ಕೂ ಅಧಿಕ ಆಸ್ತಿಗಳನ್ನು ಸಕ್ರಮ ಮಾಡಲು ಮುಂದಾಗಿದೆ, ಭೂಪರಿವರ್ತನೆಯಲ್ಲಿ ಪಾರದರ್ಶಕತೆಗಾಗಿ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಲಾಗುತ್ತಿರುವ ನೂತನ ವ್ಯವಸ್ಥೆಯಲ್ಲಿ ಕಂದಾಯ ನಿವೇಶನಗಳ ಆಸ್ತಿಗಳ ಸಕ್ರಮಕ್ಕೂ ಅವಕಾಶ ಮಾಡಿಕೊಡಲು ಚಿಂತನೆ ನಡೆಸಿದೆ.