ಬೆಂಗಳೂರು: ಕಂದಾಯ ನಿವೇಶನದಲ್ಲಿ ಮನೆ ನಿರ್ಮಿಸಿದವರಿಗೆ ದುಪ್ಪಟ್ಟು ತೆರಿಗೆ ವಿಧಿಸಲು ಚರ್ಚೆ ನಡೆದಿದೆ. ಭೂ ಪರಿವರ್ತನೆ, ನಕ್ಷೆ ಮಂಜೂರಾತಿ ಇಲ್ಲದೆ ನಿಯಮ ಉಲ್ಲಂಘಿಸಿ ಕಂದಾಯ ನಿವೇಶನಗಳಲ್ಲಿ ನಿರ್ಮಿಸಿರುವ ಕಟ್ಟಡಗಳ ಮಾಲೀಕರಿಂದ ದಂಡ ಹಾಗೂ ದುಪ್ಪಟ್ಟು ತೆರಿಗೆ ವಸೂಲಿ ಮಾಡುವ ಬಗ್ಗೆ ರಾಜ್ಯದಾದ್ಯಂತ ಬಿಬಿಎಂಪಿ ಮಾದರಿಯಲ್ಲಿ ಏಕರೂಪ ತೆರಿಗೆ ನಿಯಮ ಜಾರಿಗೊಳಿಸುವ ಬಗ್ಗೆ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ವಿಧಾನಸೌಧ ಸಮಿತಿ ಸಭಾಂಗಣದಲ್ಲಿ ಸಚಿವ ಈಶ್ವರ್ ಖಂಡ್ರೆ ಅಧ್ಯಕ್ಷತೆಯ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಈ ಕುರಿತಾಗಿ ಸುಧೀರ್ಘ ಚರ್ಚೆ ನಡೆಸಲಾಗಿದೆ. ಇನ್ನು ಮುಂದೆ ಭೂ ಪರಿವರ್ತನೆ, ನಕ್ಷೆ ಮಂಜೂರಾತಿ ಇಲ್ಲದೇ ಅಕ್ರಮ ಬಡಾವಣೆ ನಿರ್ಮಾಣ ಮಾಡುವವರಿಗೆ ದಂಡ ಹಾಗೂ ಜೈಲು ಶಿಕ್ಷೆ ವಿಧಿಡಿಸುವ ಬಗ್ಗೆ ಕಾನೂನು ತಿದ್ದುಪಡಿ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿದೆ.
ಅನಧಿಕೃತವಾಗಿ ನಿರ್ಮಿಸಿದ ಕಟ್ಟಡಗಳಿಗೆ ಒಂದು ಬಾರಿ ದಂಡ ವಿಧಿಸಿ ಮೊದಲ ವರ್ಷ ದುಪ್ಪಟ್ಟು ತೆರಿಗೆ ವಿಧಿಸಿ ನಂತರದ ವರ್ಷಗಳಲ್ಲಿ ನಿಯಮಿತವಾಗಿ ತೆರಿಗೆ ವಿಧಿಸಬಹುದು ಎನ್ನುವ ಬಗ್ಗೆ ಚರ್ಚೆ ನಡೆದಿದೆ.