ಬೆಂಗಳೂರು: ಕಂದಾಯ ಇಲಾಖೆಯನ್ನು ಮತ್ತಷ್ಟು ಜವಾಬ್ದಾರಿಯುತ ಮತ್ತು ಜನಸ್ನೇಹಿಯಾಗಿ ರೂಪಿಸಲು ಕ್ರಮ ಕೈಗೊಳ್ಳಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ ಕಂದಾಯ ಇಲಾಖೆಯನ್ನು ಜನಸ್ನೇಹಿಯಾಗಿ ರೂಪಿಸುವುದಾಗಿ ಘೋಷಣೆ ಮಾಡಲಾಗಿದೆ. ಜನಸಾಮಾನ್ಯರ ದೈನಂದಿನ ಜೀವನದೊಂದಿಗೆ ನೇರ ಸಂಬಂಧ ಹೊಂದಿದ ಮತ್ತು ಸರ್ಕಾರದ ವರ್ಚಸ್ಸಿನ ಮೇಲೆ ನೇರ ಪರಿಣಾಮ ಬೀರುವ ಕಂದಾಯ ಇಲಾಖೆಯನ್ನು ಜವಾಬ್ದಾರಿಯುತವಾಗಿ ರೂಪಿಸಲಾಗುವುದು.
ಇಲಾಖೆಯ ಆಡಳಿತದಲ್ಲಿ ದಕ್ಷತೆ ಹೆಚ್ಚಿಸುವ ಜೊತೆಗೆ ಎಲ್ಲಾ ಸೇವೆಗಳನ್ನು ಸರಳವಾಗಿ ಸಕಾಲದಲ್ಲಿ ಜನರಿಗೆ ತಲುಪಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಪರಿಶಿಷ್ಟರಿಗೆ ಮಂಜೂರಾಗಿರುವ ಜಮೀನುಗಳ ರಕ್ಷಣೆಗೆ ಒತ್ತು ನೀಡಲು ಪಿಟಿಸಿಎಲ್ ಕಾಯ್ದೆಗೆ ಸೂಕ್ತ ತಿದ್ದುಪಡಿ ಮಾಡಲಾಗುತ್ತದೆ. ಜನದಟ್ಟಣೆ ಇರುವ ಬೆಂಗಳೂರಿನ 8 ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಹೆಚ್ಚುವರಿ ಮೂಲ ಸೌಕರ್ಯ ಕಲ್ಪಿಸುವ ಮೂಲಕ ಜನಸ್ನೇಹಿ ಕಚೇರಿಗಳಾಗಿ ಮೇಲ್ದರ್ಜೆಗೇರಿಸಲಾಗುತ್ತದೆ. ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆಗೆ ಅವಕಾಶ ಕಲ್ಪಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆ ಸೆಕ್ಷನ್ 95ಕ್ಕೆ ತಿದ್ದುಪಡಿ ತರಲಾಗುವುದು ಎಂದು ಹೇಳಲಾಗಿದೆ.