ಬೆಂಗಳೂರು: ಗ್ಯಾರಂಟಿ ಯೋಜನೆಗಳ ಜಾರಿಗೆ ಅಗತ್ಯವಾಗಿರುವ ಹೆಚ್ಚುವರಿ ಸಂಪನ್ಮೂಲ ಸಂಗ್ರಹಕ್ಕೆ ಪೂರಕವಾಗಿ ಸ್ಥಿರಾಸ್ತಿ ಮಾರ್ಗಸೂಚಿ ದರಗಳಲ್ಲಿ ಗಣನೀಯ ಏರಿಕೆ ಮಾಡುವ ಸಾಧ್ಯತೆ ಇದೆ.
ವಾಸ್ತವಿಕ ಮಾರುಕಟ್ಟೆ ದರ ಆಧರಿಸಿ ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಿಸಲು ಕಂದಾಯ ಇಲಾಖೆ ಮುಂದಾಗಿದೆ. ರಾಜ್ಯದ ಹಲವು ಭಾಗದಲ್ಲಿ ಈ ಬಾರಿ ಸ್ಥಿರಾಸ್ತಿ ಮಾರ್ಗಸೂಚಿ ದರಗಳ ಗಣನೀಯ ಏರಿಕೆ ಕಾಣುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಪ್ರಮುಖ ನಗರ ಪಟ್ಟಣಗಳ ಹೊರವಲಯ ಮತ್ತು ನಗರ ಪ್ರದೇಶಗಳಿಗೆ ಹೊಂದಿಕೊಂಡ ಅರೆನಗರ ಪ್ರದೇಶಗಳ ಬಹು ಭಾಗಗಳಲ್ಲಿ ಸ್ಥಿರಾಸ್ತಿ ವಾಸ್ತವಿಕ ಮಾರುಕಟ್ಟೆ ದರ ಮತ್ತು ಮಾರ್ಗಸೂಚಿ ದರಗಳ ನಡುವೆ ಭಾರಿ ವ್ಯತ್ಯಾಸ ಇದ್ದು, ಅಂತಹ ಪ್ರದೇಶಗಳನ್ನು ಗುರುತಿಸಿ ಮಾರುಕಟ್ಟೆ ದರ ನಿಗದಿಪಡಿಸಲಾಗುವುದು. ಮಾರ್ಗಸೂಚಿ ದರ ಪರಿಷ್ಕರಣೆಗೆ ಕ್ರಮ ಕೈಗೊಳ್ಳುವಂತೆ ಆರ್ಥಿಕ ಇಲಾಖೆಯಿಂದ ಕಂದಾಯ ಇಲಾಖೆಗೆ ನಿರ್ದೇಶನ ನೀಡಲಾಗಿದೆ.
2022 -23ನೇ ಆರ್ಥಿಕ ವರ್ಷದಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕದಿಂದ 15000 ಸಾವಿರ ಕೋಟಿ ರೂ. ಸಂಗ್ರಹದ ಗುರಿ ಹೊಂದಿದ್ದು, 17,8733 ಕೋಟಿ ರೂ. ಸಂಗ್ರಹಿಸಲಾಗಿದೆ. ಬಸವರಾಜ ಬೊಮ್ಮಾಯಿ ಫೆಬ್ರವರಿಯಲ್ಲಿ ಮಂಡಿಸಿದ್ದ ಬಜೆಟ್ ನಲ್ಲಿ 2023 -24ನೇ ಶಾಲೆಗೆ 19,000 ಕೋಟಿ ರೂ. ಸಂಗ್ರಹ ಗುರಿ ಪ್ರಕಟಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈನಲ್ಲಿ ಮಂಡಿಸಿದ ಬಜೆಟ್ ನಲ್ಲಿ 25,000 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಲಾಗಿದೆ. ಕಳೆದ ವರ್ಷಕ್ಕಿಂತ ಹೆಚ್ಚುವರಿ 7127 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿದ್ದು, ಮಾರ್ಗಸೂಚಿ ದರ ಪರಿಷ್ಕರಣೆ ಅನಿವಾರ್ಯವಾಗಿದೆ.
ರಾಜ್ಯದಾದ್ಯಂತ ಏಕರೂಪದಲ್ಲಿ ಮಾರ್ಗಸೂಚಿ ಹೆಚ್ಚಳ ಮಾಡುವುದಿಲ್ಲ. ವಾಸ್ತವಿಕ ಮಾರುಕಟ್ಟೆ ದರ ಮತ್ತು ಮಾರ್ಗಸೂಚಿ ದರದ ನಡುವೆ ಭಾರಿ ಅಂತರ ಇರುವ ಪ್ರದೇಶಗಳಲ್ಲಿ ಹೆಚ್ಚಿನ ಏರಿಕೆ ಆಗುತ್ತದೆ. ಕಡಿಮೆ ಅಂತರ ಇರುವ ಪ್ರದೇಶದಲ್ಲಿ ಮಾರ್ಗಸೂಚಿ ದರ ಕಡಿಮೆ ಇರಲಿದೆ ಎಂದು ಹೇಳಲಾಗಿದೆ.