ಬೆಂಗಳೂರು: ಮುಂಗಾರು ಕೊರತೆಯಿಂದ ಬೆಳೆ ನಷ್ಟವಾದ ರೈತರಿಗೆ ಪರಿಹಾರ ಪಾವತಿಸಲು ಕಂದಾಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ಬೆಂಗಳೂರಿನಲ್ಲಿ ಶನಿವಾರ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಸಿದ್ಧತೆ ಕುರಿತಾಗಿ ಚರ್ಚಿಸಿ ಸೂಚನೆ ನೀಡಿದ್ದಾರೆ.
ಕೇಂದ್ರ ಸರ್ಕಾರ ರೈತರಿಗೆ ಪರಿಹಾರ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಮೊದಲ ಕಂತು ಜಮಾ ಮಾಡುವುದಾಗಿ ಮುಖ್ಯಮಂತ್ರಿಗಳು ಪ್ರಕಟಿಸಿದ್ದರು. ಜಮೀನಿನ ಮಾಹಿತಿ ಅಪ್ಡೇಟ್ ಮಾಡಲು ರೈತರಿಗೆ ಅವಕಾಶ ನೀಡಲಾಗಿತ್ತು. ಇದೀಗ ಮೊದಲ ಕಂತು ರೈತರ ಖಾತೆಗೆ ಪಾವತಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಡಿಬಿಟಿ ಮೂಲಕ ಗರಿಷ್ಠ 2000 ರೂ.ವರೆಗೆ ಮೊದಲ ಕಂತಿನ ಬೆಳೆ ನಷ್ಟ ಪರಿಹಾರ ನೀಡಲಾಗುವುದು. ಕೇಂದ್ರದಿಂದ ಪರಿಹಾರ ಬಿಡುಗಡೆ ಮಾಡಿದ ಬಳಿಕ ಮೊದಲ ಕಂತಿನ ಪಾವತಿ ಕಳೆದು ಬಾಕಿ ಹಣ ನೀಡಲಾಗುತ್ತದೆ. ಮಳೆಯಾಶ್ರಿತ ಪ್ರದೇಶದ ಪ್ರತಿ ಹೆಕ್ಟೇರ್ ಗೆ 8500 ರೂ., ನೀರಾವರಿ ಪ್ರದೇಶಕ್ಕೆ 17,000 ರೂ., ಬಹುವಾರ್ಷಿಕ ಬೆಳೆಗೆ 22,500 ರೂಪಾಯಿ ನಿಗದಿ ಮಾಡಲಾಗಿದೆ.