ಬೆಂಗಳೂರು: ಕಂದಾಯ ಇಲಾಖೆ ದರಖಾಸ್ತು ಪೋಡಿ ಅಭಿಯಾನ ಕೈಗೊಂಡಿದ್ದು, ಅರ್ಜಿ ಸಲ್ಲಿಸದಿದ್ದರೂ ಕಂದಾಯ ಇಲಾಖೆಯಿಂದ ರೈತರ ಜಮೀನಿನಲ್ಲಿ ಸರ್ವೆ ನಡೆಸಿ ಪೋಡಿ ಮಾಡಿಕೊಡಲಾಗುವುದು.
ಸರ್ಕಾರಿ ಭೂಮಿ ಮಂಜೂರಾತಿ ಪಡೆದುಕೊಂಡವರ ಪೋಡಿ, ಒತ್ತುವರಿ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಪರಿಹಾರ ನೀಡಲು ಕಂದಾಯ ಇಲಾಖೆಯಿಂದ ಪೋಡಿ ಆಂದೋಲನ ಕೈಗೊಳ್ಳಲಾಗಿದೆ. ರಾಮನಗರ ಜಿಲ್ಲೆಯಲ್ಲಿ ಪ್ರಾಯೋಗಿಕ ಸರ್ವೆ ಕೈಗೊಳ್ಳಲಾಗಿದೆ.
ದರಖಾಸ್ತು ಪೋಡಿ ಮಾಡಿಕೊಡಲು ಭೂಮಂಜೂರಿದಾರರು, ಗ್ರಾಮ ಲೆಕ್ಕಾಧಿಕಾರಿಗಳಿಂದ ಹಿಡಿದು ಅನೇಕ ಕಚೇರಿಗಳಿಗೆ ಅಲೆದಾಡಬೇಕಿತ್ತು. ಈ ಆಂದೋಲನದ ಮೂಲಕ ಅರ್ಜಿ ಸಲ್ಲಿಸದಿದ್ದರೂ ರೈತರ ಜಮೀನಿನಲ್ಲಿ ಸರ್ವೆ ನಡೆಸಿ ಕಂದಾಯ ಇಲಾಖೆ ಪೋಡಿ ಮಾಡಿಕೊಡಲಿದೆ.
ಸರ್ಕಾರಿ ಭೂಮಿಯನ್ನು ದರಖಾಸ್ತು ಕಮಿಟಿ ಮೂಲಕ ಪಡೆದುಕೊಂಡವರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ. ಸರ್ಕಾರದಿಂದ ಭೂ ಮಂಜೂರಾತಿ ಆಗಿರುವ ಪೋಡಿ ಪ್ರಕರಣಗಳ ಬಾಕಿ ವಿಲೇವಾರಿಗಾಗಿ ದರಖಾಸ್ತು ಪೋಡಿ ಆಂದೋಲನ ಕೈಗೊಂಡಿದ್ದು, ರೋವರ್, ಟ್ಯಾಬ್, ಆರ್ಥೋ ರೆಕ್ಟಿಫೈಡ್ ರೆಡಾರ್ ಇಮೇಜ್ ಆಧಾರಿತ ಸರ್ವೆ ಮೂಲಕ ಬಾಕಿ ಇರುವ ಪೋಡಿ ಪ್ರಕರಣಗಳ ಸರ್ವೆ ನಡೆಸಲಾಗುತ್ತಿದೆ.
ಎಲ್ಲಾ ಅರ್ಹರಿಗೆ ಮಂಜೂರಾದ ಭೂಮಿ ಮಾಹಿತಿ ಸಿಗಲಿದೆ. ಸರ್ವೇ ನಂಬರ್, ವಿಸ್ತೀರ್ಣ, ಒತ್ತುವರಿ ಗೊತ್ತಾಗಲಿದೆ. ಸ್ಥಳದಲ್ಲೇ ವಿಸ್ತೀರ್ಣ ಪರಿಶೀಲಿಸಿ ಒತ್ತುವರಿ ತೆರವು ನಡೆಸಲಾಗುವುದು. ರೋವರ್, ಟ್ಯಾಬ್, ಆರ್ಥೋ ರೆಕ್ಟಿಫೈಡ್ ರೆಡಾರ್ ಇಮೇಜ್ ನಿಂದ ಪಾರದರ್ಶಕತೆ ಇರಲಿದೆ. ವಿಸ್ತೀರ್ಣದಲ್ಲಿ ವ್ಯತ್ಯಾಸವಾಗುವುದಿಲ್ಲ. ಬದಲಾವಣೆ ಅವಕಾಶ ಇರುವುದಿಲ್ಲ. ಹಿಡುವಳಿದಾರರ ಭೂಮಿ ಓವರ್ ಲ್ಯಾಪ್ ಆಗುವುದಿಲ್ಲ. ದೋಷಕ್ಕೆ ಮುಕ್ತಿ ಸಿಗಲಿದೆ. ಕಚೇರಿಯಲ್ಲಿ ಪೋಡಿ ಸಿದ್ದಪಡಿಸುವ ಕಾರ್ಯ ಸರಾಗವಾಗಲಿದೆ ಎಂದು ಹೇಳಲಾಗಿದೆ.