ಬೆಂಗಳೂರು: ರಾಜ್ಯದಲ್ಲಿ ಇದುವರೆಗೆ 13.17 ಲಕ್ಷ ಎಕರೆ ಕಂದಾಯ ಭೂಮಿ ಒತ್ತುವರಿಯಾಗಿದೆ ಎಂಬುದನ್ನು ಕಂದಾಯ ಇಲಾಖೆ ಪತ್ತೆ ಮಾಡಿದ್ದು, ಸೆ. 2ರಿಂದ ರಾಜ್ಯದಾದ್ಯಂತ ಕಟ್ಟುನಿಟ್ಟಿನ ತೆರವು ಕಾರ್ಯಾಚರಣೆ ಆರಂಭಿಸಲು ಸಜ್ಜಾಗಿದೆ.
ರಾಜ್ಯದಲ್ಲಿ 26 ಲಕ್ಷ ಎಕರೆ ಕಂದಾಯ ಭೂಮಿ ಗುರುತಿಸಿದ್ದು, 13.17 ಲಕ್ಷ ಎಕರೆ ಒತ್ತುವರಿ ಆಗಿದೆ. ರಾಜ್ಯಾದ್ಯಂತ 239 ತಹಶೀಲ್ದಾರ್ ಗಳಿದ್ದು, ಪ್ರತಿಯೊಬ್ಬರು ತಮ್ಮ ವ್ಯಾಪ್ತಿಯಲ್ಲಿ ತಿಂಗಳಿಗೆ 10 ರಿಂದ 20 ಒತ್ತುವರಿ ಪ್ರಕರಣಗಳಲ್ಲಿ ತೆರವು ಕಾರ್ಯ ಕೈಗೊಳ್ಳಬೇಕು. ಸಂಬಂಧಿಸಿದ ಜಿಲ್ಲಾಧಿಕಾರಿಗಳು ವಾರಾಂತ್ಯದಲ್ಲಿ ಪ್ರಗತಿ ಪರಿಶೀಲಿಸಿ ಕಂದಾಯ ಆಯುಕ್ತಾಲಯಕ್ಕೆ ವರದಿ ಸಲ್ಲಿಸಬೇಕು. ಈ ಮೂಲಕ ಒತ್ತುವರಿ ತೆರವು ಕಾರ್ಯಾಚರಣೆ ತ್ವರಿತಗೊಳಿಸಿ ಕಂದಾಯ ಭೂಮಿ ವಶಕ್ಕೆ ಪಡೆಯುವ ಕಾರ್ಯಾಚರಣೆಗೆ ಚಾಲನೆ ನೀಡಲಾಗುತ್ತಿದೆ.
ಆದ್ಯತೆಯ ಮೇರೆಗೆ ಕೆರೆ, ಸ್ಮಶಾನ ಭೂಮಿ ಒತ್ತುವರಿ ತೆರವುಗೊಳಿಸಬೇಕು. ಜಮೀನು ಕಂದಾಯ ಜಮೀನು ಒತ್ತುವರಿ ಮಾಡಿ ನಿರ್ಮಿಸಿದ ವಾಣಿಜ್ಯ ಕಟ್ಟಡ, ಇತರೆ ಲಾಭದಾಯಕ ಉದ್ದೇಶಕ್ಕೆ ಅಭಿವೃದ್ದಿಪಡಿಸಿದ್ದಲ್ಲಿ ಮುಲಾಜಿಲ್ಲದೆ ತೆರವುಗೊಳಿಸುವಂತೆ ಸೂಚನೆ ನೀಡ;ಆಹೊದೆ.
ಕೃಷಿ ಭೂಮಿಯಾಗಿದ್ದಲ್ಲಿ ಬೆಳೆ ಬೆಳೆದಿದ್ದರೆ ಕೃಷಿ ಚಟುವಟಿಕೆ ನಡೆದಿರುವ ಭೂಮಿಯ ಒತ್ತುವರಿ ಕೊನೆಯ ಹಂತದಲ್ಲಿ ಪರಿಶೀಲಿಸಿ ನಿಯಮಾನಸಾರ ಕ್ರಮ ಕೈಗೊಳ್ಳಬೇಕು. ಕಂದಾಯ ಇಲಾಖೆ ಸರ್ವೆ ಜೊತೆ ಜೊತೆಗೆ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಭೂ ದಾಖಲೆಗಳ ಹೆಚ್ಚುವರಿ ನಿರ್ದೇಶಕರು ಸರ್ವೇ ಕಾರ್ಯ ಕೈಗೊಳ್ಳಲಿದ್ದು, ತಹಶೀಲ್ದಾರ್ ಗಳು ಒತ್ತುವರಿ ತೆರವು ಮಾಡಿ ಜಿಯೋ ಫೆನ್ಸಿಂಗ್ ದಾಖಲಿಸುವ ಕಾರ್ಯ ಕೈಗೊಳ್ಳಲಿದ್ದಾರೆ.
ರೈತರು ಸಾಗುವಳಿ ಮಾಡುತ್ತಿರುವ ಭೂಮಿ ಹೊರತುಪಡಿಸಿ ಉಳಿದ ಒತ್ತುವರಿ ತೆರವುಗೊಳಿಸಬೇಕು. ಕೆರೆ, ಸ್ಮಶಾನ, ತೋಪು, ರಸ್ತೆ ಒತ್ತುವರಿಯನ್ನು ಆದ್ಯತೆ ಮೇರೆಗೆ ತೆರವುಗೊಳಿಸಲು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೂಚನೆ ನೀಡಿದ್ದಾರೆ.