ಬೆಂಗಳೂರು: ಮನೆ ಬಾಗಿಲಿಗೆ ಆಡಳಿತ ಕೊಂಡೊಯ್ಯುವ ನಿಟ್ಟಿನಲ್ಲಿ ಕಂದಾಯ ಆಯುಕ್ತಾಲಯ ಸ್ಥಾಪನೆ ಮಾಡಲಾಗಿದೆ.
ಆರ್. ಅಶೋಕ್ ಕಂದಾಯ ಸಚಿವರಾಗಿದ್ದ ಸಂದರ್ಭದಲ್ಲೇ ರಾಜ್ಯ ಸರ್ಕಾರ ಕಂದಾಯ ಆಯುಕ್ತಾಲಯ ಸ್ಥಾಪನೆಗೆ ಮುಂದಾಗಿತ್ತು. ಮೂರು ವರ್ಷಗಳ ನಂತರ ಕಾರ್ಯರೂಪಕ್ಕೆ ಬಂದಿದೆ. ರಾಜ್ಯಮಟ್ಟದಲ್ಲಿ ಕಂದಾಯ ಆಯುಕ್ತಾಲಯ ಕಾರ್ಯನಿರ್ವಹಿಸಲಿದೆ. ಐಎಎಸ್ ದರ್ಜೆಯ ಆಯುಕ್ತರು ಕಂದಾಯ, ಭೂ ಸ್ವಾಧೀನ, ಪುನರ್ವಸತಿ ಮತ್ತು ಪುನರ್ ನಿರ್ಮಾಣ, ಸಾಮಾಜಿಕ ಭದ್ರತೆ ಹುದ್ದೆಯನ್ನು ಸೃಜಿಸಲಾಗಿದೆ.
ಸರ್ಕಾರದ ಶಿಫಾರಸಿಗೆ ರಾಜ್ಯಪಾಲರು ಅಂಕಿತ ಹಾಕಿದ್ದು, ರಾಜ್ಯ ಪತ್ರದಲ್ಲಿ ಪ್ರಕಟವಾಗಿದೆ. ಕಂದಾಯ ಆಯುಕ್ತಾಲಯ ಅಸ್ತಿತ್ವಕ್ಕೆ ಬಂದಿದ್ದು, ನಾಗರಿಕ ಸ್ನೇಹಿ ಆಡಳಿತ, ಕಂದಾಯ ಸೇವೆ, ಅಧಿಕಾರ ವಿಕೇಂದ್ರೀಕರಣ, ದಕ್ಷತೆ ಆಯುಕ್ತಾಲಯದ ಉದ್ದೇಶವಾಗಿದೆ.
ಕೆಲಸದ ಪ್ರಕ್ರಿಯೆ ಸರಳೀಕರಣ, ಕಂದಾಯ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನ ಹೊಂದಿರುವ ಕಂದಾಯ ಆಯುಕ್ತಾಲಯ 7 ವಿಭಾಗಗಳಲ್ಲಿ ಹಂಚಿಕೆ ಮಾಡಲಾದ ವಿಷಯಗಳ ನಿರ್ವಹಣೆ ಮಾಡಲಿದೆ. ಆಡಳಿತ ಸಮನ್ವಯ, ಉಸ್ತುವಾರಿ, ಕಂದಾಯ, ಸಾಮಾಜಿಕ ಭದ್ರತೆ, ಪಿಂಚಣಿ, ಆನ್ಲೈನ್ ಸೇವೆ ವಿತರಣೆ, ಲೆಕ್ಕಪರಿಶೋಧನೆ, ಆಯವ್ಯಯ, ಸಾಂಖ್ಯಿಕ, ಭೂಮಿ ಉಸ್ತುವಾರಿ ವಿಭಾಗಗಳ ಜವಾಬ್ದಾರಿ ನೀಡಲಾಗಿದ್ದು, ಆಯುಕ್ತಾಲಯಕ್ಕೆ ಅಗತ್ಯವಾದ ಎಲ್ಲಾ ಹುದ್ದೆಗಳನ್ನು ಆಯುಕ್ತರ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಚೇರಿಗಳಿಂದ ಮರು ಸ್ಥಳ ನೀಡುವ ಮೂಲಕ ಭರ್ತಿ ಮಾಡಲಾಗುವುದು. ಕಂದಾಯ ಭವನದ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯ ಕಟ್ಟಡದಲ್ಲಿರುವ 12 ಸಾವಿರ ಚದರಡಿ ಜಾಗವನ್ನು ಆಯುಕ್ತಾಲಯಕ್ಕೆ ನೀಡಿ, 5 ಕೋಟಿ ರೂ. ಅನುದಾನ ಒದಗಿಸಲಾಗಿದೆ.