ಬೆಂಗಳೂರು: ರಾಜ್ಯದ ಆಸ್ಪತ್ರೆಗಳಲ್ಲಿ ಬಳಕೆ ಮಾಡುತ್ತಿರುವ 400ಕ್ಕೂ ಹೆಚ್ಚು ಔಷಧಗಳು ಪ್ರಮಾಣಿತ ಗುಣಮಟ್ಟವನ್ನು ಹೊಂದಿಲ್ಲ ಎನ್ನುವುದು ಗೊತ್ತಾಗಿದೆ.
ರಾಜ್ಯ ಔಷಧ ನಿಯಂತ್ರಣ ಇಲಾಖೆಯಿಂದ ನಡೆಸಿದ ಪ್ರಯೋಗಾಲಯ ಪರೀಕ್ಷೆಗಳಲ್ಲಿ 400 ಔಷಧಗಳ ಗುಣಮಟ್ಟ ಕಳಪೆಯಾಗಿದೆ ಎನ್ನುವುದು ದೃಢಪಟ್ಟಿದೆ. ಇತ್ತೀಚೆಗೆ ಬಳ್ಳಾರಿಯಲ್ಲಿ ನಡೆದ ಬಾಣಂತಿಯರ ಸರಣಿ ಸಾವಿನ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಪಶ್ಚಿಮ್ ಬಂಗಾ ಫಾರ್ಮಸ್ಯುಟಿಕಲ್ಸ್ ಕಂಪನಿ ಸರಬರಾಜು ಮಾಡಿದ್ದ ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣವನ್ನು ರಾಜ್ಯದಲ್ಲಿ ನಿಷೇಧಿಸಲಾಗಿದೆ.
ರಾಜ್ಯದ ಔಷಧ ನಿಯಂತ್ರಕರು ನಡೆಸಿದ ಪರೀಕ್ಷೆಯಲ್ಲಿ ಈ ದ್ರಾವಣದ 22 ಬ್ಯಾಚ್ ಗಳು ಪ್ರಮಾಣಿತ ಗುಣಮಟ್ಟ ಒಂದಿಲ್ಲ ಎನ್ನುವುದು ಗೊತ್ತಾಗಿದೆ. ಕಂಪನಿ ವಿರುದ್ಧ ಪ್ರಾಸಿಕ್ಯೂಷನ್ ಗೆ ಹೆಚ್ಚುವರಿ ಔಷಧ ನಿಯಂತ್ರಕರು ದೂರು ದಾಖಲಿಸಿಕೊಂಡಿದ್ದಾರೆ.
ಇದೇ ರೀತಿ ರಾಜ್ಯ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ವಿವಿಧ ಔಷಧಗಳ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಗಳಲ್ಲಿ ಗುಣಮಟ್ಟ ಪರೀಕ್ಷೆಗೆ ಒಳಪಡಿಸಿದ್ದು, ಅನೇಕ ಔಷಧಗಳು ಪ್ರಮಾಣಿತ ಗುಣಮಟ್ಟ ಹೊಂದಿಲ್ಲ ಎನ್ನುವುದು ಗೊತ್ತಾಗಿದೆ.
ರಾಜ್ಯದ ಆಸ್ಪತ್ರೆ, ನರ್ಸಿಂಗ್ ಹೋಮ್, ಕ್ಲಿನಿಕ್ ಗಳಲ್ಲಿ ಬಳಕೆ ಮಾಡುವ ಔಷಧಗಳಿಗೆ ಸಂಬಂಧಿಸಿದಂತೆ 2023 -24 ನೇ ಸಾಲಿನಲ್ಲಿ 7420 ಔಷಧ ಮಾದರಿ ಪ್ರಯೋಗಾಲಯ ಪರೀಕ್ಷೆಗೆ ಒಳಪಡಿಸಿದ್ದು, ಇವುಗಳಲ್ಲಿ 285 ಪ್ರಮಾಣಿತ ಗುಣಮಟ್ಟ ಹೊಂದಿಲ್ಲ. 2024- 25 ನೇ ಸಾಲಿನಲ್ಲಿ ಅಕ್ಟೋಬರ್ ವರೆಗೆ 3636 ಮಾದರಿ ಪ್ರಯೋಗಾಲಯ ಪರೀಕ್ಷೆಗೆ ಒಳಪಡಿಸಿದ್ದು, 177 ಪ್ರಮಾಣಿತ ಗುಣಮಟ್ಟ ಹೊಂದಿಲ್ಲ ಎನ್ನುವುದು ಗೊತ್ತಾಗಿದೆ.