ಬೆಂಗಳೂರು: ಬೆಂಗಳೂರು ನಗರದ ಹೊರವಲಯದಲ್ಲಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರ ವಿರುದ್ಧವೇ ಆರೋಪ ಕೇಳಿಬಂದಿದ್ದು, ದೂರು ದಾಖಲಾಗಿದೆ.
ರೇವ್ ಪಾರ್ಟಿ ಪ್ರಕರಣದ ತನಿಖೆ ನಡೆಸಿದ್ದ ಸಿಸಿಬಿ ಪೊಲೀಸರ ವಿರುದ್ಧ ಲೋಕಾಯುಕ್ತ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ. ಪಾರ್ಟಿಯಲ್ಲಿ ಭಾಗಿಯಾದವರಿಂದ ಸುಲಿಗೆ ಮತ್ತಿತರ ಗಂಭೀರ ಆರೋಪಗಳು ಕೇಳಿಬಂದಿವೆ.
ಆರ್ ಟಿ ಐ ಕಾರ್ಯಕರ್ತ ವಿಜಯ್ ಡೆನೀಸ್ ಎಂಬುವವರು ದೂರು ನೀಡಿದ್ದಾರೆ. ಬೆಂಗಳೂರು ನಗರದ ಹೊರವಲಯದ ಫಾರ್ಮ್ ಹೌಸ್ ಮೇಲೆ ರೇವ್ ಪಾರ್ಟಿ ಆರೋಪದಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ದಾಳಿ ನಡೆಸಿ ಕಾನೂನು ಪ್ರಕ್ರಿಯೆಗೆ ಮುಂದಾಗದೇ ಪೊಲೀಸರು ಸುಲಿಗೆಗೆ ಮುಂದಾಗಿದ್ದಾರೆ. ಪಾರ್ಟಿಯಲ್ಲಿ ಭಾಗವಹಿಸಿದವರನ್ನು ಬೆದರಿಸಿ ತಲಾ 10 ಲಕ್ಷ ರೂಪಾಯಿ ನೀಡುವಂತೆ ಬೇದಿಕೆ ಇಟ್ಟಿದ್ದಾರೆ. ಪಾರ್ಟಿಯಲ್ಲಿ ಭಾಗಿಯಾಗಿದ್ದ ವ್ಯಕ್ತಿ ಮಾದಕವಸ್ತು ಸೇವಿಸಿದ್ದಾಗಿ ವರದಿಯಲ್ಲಿ ದೃಢಪಟ್ಟಿದೆ. ಅವರ ವಾಹನ ಬಿಡುಗಡೆ ಮಡಲು 4.2 ಲಕ್ಷ ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಪೊಲೀಸರು ತಮಗೆ ಅನುಕೂಲವಾಗುವಂತೆ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ತಪಾಸಣೆ ನಡೆಸಿದ್ದಾರೆ ಎಂದು ಆರೋಪಿಸಿ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.