ಬಳ್ಳಾರಿ: ಪ್ರಯಾಣಿಕರೊಬ್ಬರು ಬಸ್ ನಲ್ಲಿ ಬಿಟ್ಟು ಹೋಗಿದ್ದ ನಗದು ಹಾಗೂ ಚಿನ್ನಾಭರಣ ಇದ್ದ ಬ್ಯಾಗ್ ಅನ್ನು ಹಿಂತಿರುಗಿಸುವ ಮೂಲಕ ಬಸ್ ನಿಲ್ದಾಣದ ಸ್ವಚ್ಛತಾ ಸಿಬ್ಬಂದಿ ಪ್ರಾಮಾಣಿಕತೆ ಮರೆದಿದ್ದಾರೆ.
ಹಗರಿಬೊಮ್ಮನಹಳ್ಳಿ ಬಸ್ ನಿಲ್ದಾಣದ ಸ್ವಚ್ಛತಾ ಸಿಬ್ಬಂದಿ ಚಿತ್ರಂಪಳ್ಳಿ ಮಾರುತಿ ಅವರ ಪ್ರಾಮಾಣಿಕತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಭಾನುವಾರ ಸಂಜೆ ಹೊಸಪೇಟೆಯಿಂದ ಹಗರಿಬೊಮ್ಮನಹಳ್ಳಿಗೆ ಪ್ರಯಾಣಿಸಿದ್ದ ಮಬುನ್ನೀಸಾ ಬೇಗಂ ಅವರು 3.50 ಲಕ್ಷ ರೂಪಾಯಿ ಮೌಲ್ಯದ 50 ಗ್ರಾಂ ಚಿನ್ನಾಭರಣ ಹಾಗೂ ನಗದು ಇದ್ದ ಬ್ಯಾಗ್ ಅನ್ನು ಬಸ್ ನಲ್ಲಿ ಬಿಟ್ಟು ಮನೆಗೆ ಹೋಗಿದ್ದಾರೆ.
ಬಸ್ ಸ್ವಚ್ಛಗೊಳಿಸುತ್ತಿದ್ದ ವೇಳೆ ಚಿತ್ರಂಪಲ್ಲಿ ಮಾರುತಿ ಅವರು ಈ ಬ್ಯಾಗ್ ಗಮನಿಸಿದ್ದು, ಅದರಲ್ಲಿ ಚಿನ್ನಾಭರಣ, ನಗದು ಇರುವುದನ್ನು ಕಂಡು ಬಸ್ ನಿಲ್ದಾಣದ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಸಂಬಂಧಿಸಿದ ಪ್ರಯಾಣಿಕರಿಗೆ ಅದನ್ನು ಸುರಕ್ಷಿತವಾಗಿ ತಲುಪಿಸುವ ಮೂಲಕ ಚಿತ್ರಂಪಲ್ಲಿ ಮಾರುತಿ ಪ್ರಾಮಾಣಿಕತೆ ಮೆರದಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.