ಮಂಗಳೂರು: ಆಸ್ತಿಗಾಗಿ ನಿವೃತ್ತ ಶಿಕ್ಷಕನನ್ನು ಮನೆ ಅಂಗಳದಲ್ಲಿಯೇ ಅಳಿಯ ಹಾಗೂ ಮೊಮ್ಮಗ ಸೇರಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳಾಲಿಯಲ್ಲಿ ನಡೆದಿದೆ.
83 ವರ್ಷದ ಬಾಲಕೃಷ್ಣ ಭಟ್ ಕೊಲೆಯಾದ ದುರ್ದೈವಿ. ಜ್ಯೋತಿಷಿಯೂ ಆಗಿರುವ ಅಳಿಯ ರಾಘವೇಂದ್ರ ಕೆಧಿಲಾಯ (53) ಹಾಗೂ ಆತನ ಮಗ ಮುರಳಿಕೃಷ್ಣ (20) ಮಾವನನ್ನೇ ಕೊಲೆ ಮಾಡಿರುವ ಹಂತಕರು.
ಸಿಸಿಕ್ಯಾಮರಾ ಹಾಗೂ ವಿವಿಧ ಟೆಕ್ನಿಕಲ್ ಸಹಾಯದಿಂದ ಹಂತಕರಿಬ್ಬರನ್ನು ಧರ್ಮಸ್ಥಳ ಪೊಲೀಸರು ಕಾಸರಗೋಡಿನ ಮನೆಯಲ್ಲಿ ಬಂಧಿಸಿದ್ದಾರೆ. ಕೃಷ್ಣ ಭಟ್ ಅವರನ್ನು ಆಸ್ತಿ ಹಾಗೂ ಚಿನ್ನಾಭರಣಕ್ಕಾಗಿ ಹತ್ಯೆ ಮಾಡಿದ್ದಾಗಿ ಕೊಲೆಗಾರರು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.
ನಿವೃತ್ತ ಶಿಕ್ಷಕರಾಗಿದ್ದ ಬಾಲಕೃಷ್ಣ ಭಟ್ ಅವರ ಪತ್ನಿ ಲೀಲಾ ನಾಲ್ಕು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಆಸ್ತಿ ಹಾಗೂ ಪತ್ನಿಯ ಚಿನ್ನಭರಣವನ್ನು ಮಗಳು ವಿಜಯಲಕ್ಷ್ಮೀ ಹಾಗೂ ಆಳಿಯ ರಾಘವೇಂದ್ರ ಕೇಧಿಲಾಯಗೆ ಪಾಲು ನೀಡದೇ ಬ್ಯಾಂಕ್ ಲಾಕರ್ ನಲ್ಲಿಟ್ಟಿದ್ದರು. ಪತ್ನಿಯ ತವರು ಮನೆ ಆಸ್ತಿ ಹಾಗೂ ಚಿನ್ನದ ಮೇಲೆ ಕಣ್ಣಿಟ್ಟಿದ್ದ ರಾಘವೇಂದ್ರ ಕೇಧಿಲಾಯ ತನ್ನ ಮಗ ಮುರಳಿಕೃಷ್ಣನ ಜೊತೆ ಮಾವನನ್ನೇ ಕೊಲ್ಲುವ ಪ್ಲಾನ್ ಮಾಡಿ ಕಾಸರಗೋಡಿನಿಂದ ಮಂಗಳೂರಿಗೆ ಬೈಕ್ ನಲ್ಲಿ ಬಂದಿದ್ದಾರೆ.
ಮಂಗಳೂರಿನಲ್ಲಿ ಬೈಕ್ ನಿಲ್ಲಿಸಿ ಮತ್ತೊಂದು ಸ್ಕೂಟಿಯಲ್ಲಿ ಬೆಳಾಲಿಗೆ ಬಂದು ಮಾವನ ಮನೆ ತಲುಪಿದ್ದಾರೆ. ಮಾವನೊಂದಿಗೆ ಮಧ್ಯಾಹ್ನ ಊಟ ಮಾಡಿ, ಚಹಾ ಕುಡಿದ ಬಳಿಕ ಮೊಮ್ಮಗ ಮುರಳಿಕೃಷ್ಣ ಆಯುಧದಿಂದ ಅಜ್ಜನಿಗೆ ಹಿಂಬದಿಯಿಂದ ಕುತ್ತಿಗೆ ಮೇಲೆ ಹೊಡೆದಿದ್ದಾನೆ. ಅಜ್ಜ ತಪ್ಪಿಸಿಕೊಂಡು ಮನೆಯ ಅಂಗಳಕ್ಕೆ ಓಡಿಬಂದಿದ್ದಾರೆ. ಈ ವೇಳೆ ಅಳಿಯ-ಮೊಮ್ಮಗ ಇಬ್ಬರೂ ಮತ್ತೆ ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿದ್ದಾರೆ. ಬಳಿಕ ನಲ್ಲಿ ನೀರಿನ ಕೆಳಗೆ ಹಾಕಲಾಗಿದ್ದ ಹಾಸುಕಲ್ಲನ್ನು ತಲೆಯ ಮೇಲೆ ಇಟ್ಟು ಎಸ್ಕೇಪ್ ಆಗಿದ್ದಾರೆ. ಅಲ್ಲಿಂದ ನೇರವಾಗಿ ಕಾಸರಗೋಡಿನ ತಮ್ಮ ಮನೆಗೆ ಹೋಗಿ ಎಂದಿನಂತೆ ಕೆಲಸದಲ್ಲಿದ್ದಾರೆ. ತನ್ನ ತಂದೆಯನ್ನು ಪತಿ ಹಾಗೂ ಮಗ ಕೊಲೆ ಮಡಿರುವ ವಿಷಯವೂ ಪತ್ನಿ ವಿಜಯಲಕ್ಷ್ಮಿಗೆ ತಿಳಿದಿಲ್ಲ. ಪೊಲೀಸರು ಕಾಸರಗೋಡು ಮನೆಗೆ ಬಂದು ಪತಿ ಹಾಗೂ ಮಗನನ್ನು ಬಂಧಿಸಿದಾಗಲೇ ವಿಷಯ ಬೆಳಕಿಗೆ ಬಂದಿದ್ದು, ಪತ್ನಿ ಆಘಾತಕ್ಕೊಳಗಾಗಿದ್ದಾಳೆ.