ರಾಯಚೂರು: ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡದ ನಿವೃತ್ತ ಪಿಎಸ್‌ಐಗೆ ತಾತ್ಕಾಲಿಕ ಜೈಲು ಶಿಕ್ಷೆ ನೀಡಲಾಗಿದೆ. ಮಹಾರಾಷ್ಟ್ರದ ಸೊಲ್ಲಾಪುರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚಂದ್ರಕಾಂತ ಜಂಗಮ ಮತ್ತು ಅವರ ಪತ್ನಿ ಲೀಲಾವತಿ ಬೇರೆಯಾಗಿದ್ದು, 2018ರಲ್ಲಿ ವಿಚ್ಛೇದನ ಆಗಿದೆ.
ನ್ಯಾಯಾಲಯದ ಆದೇಶದಂತೆ ಪ್ರತಿ ತಿಂಗಳು 19,500 ರೂ. ಜೀವನಾಂಶ ನೀಡಲು ಚಂದ್ರಕಾಂತ ಅವರು ಒಪ್ಪಿಕೊಂಡಿದ್ದರು. ಇತ್ತೀಚೆಗೆ ಜೀವನಾಂಶ ನೀಡಿರಲಿಲ್ಲ. ನಿರ್ಲಕ್ಷ್ಯ ವಹಿಸಿದ್ದರಿಂದಾಗಿ ಲೀಲಾವತಿ ಅವರು ಕೋರ್ಟ್ ಮೊರೆ ಹೋಗಿದ್ದರು.
ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ವಿಚ್ಛೇದಿತ ಪತ್ನಿಗೆ ಜೀವನಾಂಶ ಕೊಡದೆ ನಿರ್ಲಕ್ಷಿಸಿದ ಆರೋಪದ ಮೇಲೆ ಚಂದ್ರಕಾಂತ ಜಂಗಮ ಅವರಿಗೆ 15 ದಿನ ಕಾಲಾವಕಾಶ ನೀಡಲಾಗಿದೆ. ಈ ಅವಧಿ ಮುಗಿಯುವವರೆಗೆ ಅಂದರೆ ಮಾರ್ಚ್ 9 ರವರೆಗೆ ಕಕ್ಷಿದಾರರನ್ನು ಜೈಲಿನಲ್ಲಿ ಇರಿಸಿ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಜಿಲ್ಲಾ ಕಾರಾಗೃಹದ ಅಧ್ಯಕ್ಷರಿಗೆ ನ್ಯಾಯಾಧೀಶ ಜಗದೀಶ್ವರ ಆದೇಶ ನೀಡಿದ್ದಾರೆ.
ವಿಚ್ಛೇದಿತ ಪತ್ನಿಗೆ ಜೀವನಾಂಶ ಕೊಡಲು ಚಂದ್ರಕಾಂತ ಒಪ್ಪದ ಹಿನ್ನಲೆಯಲ್ಲಿ ಮಾ. 9 ರವರೆಗೆ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.