ದಾವಣಗೆರೆ/ಶಿವಮೊಗ್ಗ: ತೋಟದಲ್ಲಿ ಜೇನು ನೊಣಗಳ ದಾಳಿಯಿಂದ ಅಸ್ವಸ್ಥಗೊಂಡಿದ್ದ ಅಧಿಕಾರಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಗ್ರಾಮದ ನಿವಾಸಿ ಪದವಿ ಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಉಪ ನಿರ್ದೇಶಕ ಎ.ಎಸ್. ದೇವೇಂದ್ರಪ್ಪ(64) ಮೃತಪಟ್ಟ ಕ್ಕೆ ಹೋಗಿದ್ದಾಗ ಅವರ ಮೇಲೆ ಜೇನು ನೊಣಗಳು ದಾಳಿ ನಡೆಸಿವೆ. ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.
ಎರಡೆರಡು ಬಾರಿ ಹೆಜ್ಜೇನು ದಾಳಿ
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಚಿಕ್ಕಪೇಟೆ ನಗರದಲ್ಲಿ 7 ಜನರ ಮೇಲೆ ಎರಡೆರಡು ಬಾರಿ ಹೆಜ್ಜೇನು ದಾಳಿ ನಡೆಸಿದ್ದು, ಇವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ.
ಚಿಕ್ಕಪೇಟೆ ಸೇತುವೆ ಸಮೀಪ ಬಾಷಾ ಎಂಬುವರ ಮನೆಯ ಬಳಿ ಶನಿವಾರ ಬೆಳಗ್ಗೆ ಹೆಜ್ಜೇನು ದಾಳಿ ಮಾಡಿ ಬಾಷಾ, ಅವರ ಪತ್ನಿ ಅಸ್ಮಾ, ಮಕ್ಕಳಾದ ಆರೀಫ್ ಮತ್ತು ಅನೀಫ್ ಮೇಲೆ ಹೆಜ್ಜೆನು ದಾಳಿ ನಡೆಸಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಶನಿವಾರ ಸಂಜೆ 5 ಗಂಟೆ ವೇಳೆಗೆ ಅದೇ ಜಾಗದಲ್ಲಿ ಮತ್ತೆ ಹೆಜ್ಜೇನು ದಾಳಿ ನಡೆಸಿದ್ದು, ದಾಳಿಗೆ ಒಳಗಾಗಿದ್ದ ಬಾಷಾ ಅವರ ಪುತ್ರ ಆರೀಫ್ ಮತ್ತು ಪಕ್ಕದ ಮನೆಯ ಯಾಸಿನ್ ಮೇಲೆ ಮತ್ತೆ ಹೆಜ್ಜೆನುಗಳು ದಾಳಿ ನಡೆಸಿವೆ. ಇದೇ ವೇಳೆ ಹಾಸಿಗೆ ರಿಪೇರಿಗೆ ಬಂದಿದ್ದ ಶಿವಮೊಗ್ಗ ಮಂಜುನಾಥ ಬಡಾವಣೆ ನಿವಾಸಿ ಹುಸೇನ್ ಸಾಬ್ ಮತ್ತು ಅವರ ಮಗ ಬಾಬಾ ಸಾಬ್ ಎಂಬುವರು ಹೆಜ್ಜೇನು ದಾಳಿಯಿಂದ ಗಾಯಗೊಂಡಿದ್ದಾರೆ. ಹುಸೇನ್ ಸಾಬ್ ಸ್ಥಿತಿ ಗಂಭೀರವಾಗಿದೆ. ಅವರ ದೇಹದಿಂದ ನೂರಾರು ಮುಳ್ಳುಗಳನ್ನು ಹೊರತೆಗೆಯಲಾಗಿದೆ. ಒಂದೇ ಜಾಗದಲ್ಲಿ ಒಂದೇ ದಿನ ಎರಡು ಬಾರಿ ಹೆಜ್ಜೆನು ದಾಳಿ ನಡೆಸಿರುವುದು ಆತಂಕಕ್ಕೆ ಕಾರಣವಾಗಿದೆ.