ಕೇವಲ ಒಂದೂವರೆ ಗಂಟೆ ಅವಧಿಯಲ್ಲಿ ನಾಲ್ವರನ್ನು ಕೊಲೆಗೈದ ಸೇನೆಯ ನಿವೃತ್ತ ಸುಬೇದಾರ್ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ತಪ್ಪೊಪ್ಪಿಕೊಂಡ ವಿಚಿತ್ರ ಘಟನೆಯು ಗುರುಗ್ರಾಮದಲ್ಲಿ ನಡೆದಿದೆ. ಬಂಧಿತ ಆರೋಪಿಯು ಸೊಸೆ, ಬಾಡಿಗೆದಾರ, ಆತನ ಪತ್ನಿ ಹಾಗೂ 9 ವರ್ಷದ ಮಗಳನ್ನು ಕೊಲೆ ಮಾಡಿದ್ದಾನೆ. ದಂಪತಿಯ ಚಿಕ್ಕ ಮಗಳ ಮೇಲೂ ಹಲ್ಲೆ ನಡೆದಿದ್ದು ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಮೃತರನ್ನು ಸುನೀತಾ ಯಾದವ್, ಕೃಷ್ಣನ್ ತಿವಾರಿ ಹಾಗೂ ಅವರ ಪತ್ನಿ ಅನಾಮಿಕಾ ತಿವಾರಿ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿ ರಾವ್ ರಾಯ್ ಸಿಂಗ್ ಯಾದವ್ ನಿವೃತ್ತ ಸುಬೇದಾರ್ ಆಗಿದ್ದಾರೆ. ಗಿಡಗಳನ್ನು ಕತ್ತರಿಸಲು ಬಳಸುವ ಚಾಕುವಿನಿಂದ ಇವರನ್ನು ಕೊಲೆಗೈಯಲಾಗಿದೆ.
ಆರೋಪಿಯು ಮನೆ ಬಾಗಿಲನ್ನು ಬಂದ್ ಮಾಡಿ ಸೊಸೆ ಹಾಗೂ ಬಾಡಿಗೆದಾರರನ್ನು ಕೊಲೆ ಮಾಡಿದ್ದಾನೆ.
ಪ್ರಾಥಮಿಕ ತನಿಖೆಯ ಪ್ರಕಾರ , ಆರೋಪಿ ಯಾದವ್ರ ಸೊಸೆ ಕ್ರಷ್ಣನ್ ತಿವಾರಿ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಮಂಗಳವಾರ ಮುಂಜಾನೆ 2:30ರ ಸುಮಾರಿಗೆ ಮನೆಯ ಎಲ್ಲಾ ಬಾಗಿಲನ್ನು ಬಂದ್ ಮಾಡಿದ ತಿವಾರಿ ಮೊದಲ ಮಹಡಿಯಲ್ಲಿರುವ ಸೊಸೆಯ ಕೊಣೆಯನ್ನು ಪ್ರವೇಶಿಸಿದನು. ಸುನೀತಾಳನ್ನು ಕೊಲೆಗೈದ ಬಳಿಕ 2ನೇ ಮಹಡಿಗೆ ತೆರಳಿದ ಆರೋಪಿಯು ಬಾಡಿಗೆದಾರ ಹಾಗೂ ಕುಟುಂಬಸ್ಥರನ್ನು ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಎಸಿಯ ಧ್ವನಿಯಿಂದಾಗಿ ನೆರೆಹೊರೆಯವರಿಗೆ ಯಾವುದೇ ಚೀರಾಟದ ಸದ್ದು ಕೇಳಿ ಬಂದಿಲ್ಲ. ಅಲ್ಲದೇ ಇದೊಂದು ಆಕಸ್ಮಿಕ ಘಟನೆಯಾಗಿದ್ದು ಯಾರು ಕೂಡ ರಾವ್ ಈ ರೀತಿ ಮಾಡುತ್ತಾನೆ ಎಂದು ಊಹಿಸಿರಲಿಲ್ಲ ಎಂದು ಡಿಸಿಪಿ ದೀಪಕ್ ಸಹರನ್ ಹೇಳಿದ್ದಾರೆ.
4 ಗಂಟೆಯೊಳಗೆ ನಾಲ್ವರನ್ನು ಕೊಲೆಗೈದ ಆರೋಪಿಯು ರಾಜೇಂದ್ರ ಪಾರ್ಕ್ ಪೊಲೀಸ್ ಠಾಣೆಗೆ ತೆರಳಿ ಕೊಲೆ ಮಾಡಿರುವ ವಿಚಾರವನ್ನು ಹೇಳಿದ್ದಾರೆ. ಕೂಡಲೇ ಪೊಲೀಸರ ತಂಡ ಯಾದವ್ ನಿವಾಸಕ್ಕೆ ಧಾವಿಸಿದೆ ಹಾಗೂ ಬೆಳಗ್ಗೆ 7 ಗಂಟೆ ಸುಮಾರಿಗೆ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಸಾಕಷ್ಟು ಚಾಕು ಇರಿತಗಳನ್ನು ಕಂಡಿರುವ ಮೂರು ವರ್ಷದ ಬಾಲಕಿಯು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಈಕೆಯ ಸ್ಥಿತಿ ಗಂಭೀರವಾಗೋದ್ರಿಂದ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಡಿಸಿಪಿ ಮಾಹಿತಿ ನೀಡಿದ್ರು.