ಮೈಸೂರು: ಚುನಾವಣೆ ರಾಜಕಾರಣದಿಂದ ನಿವೃತ್ತಿಯಾಗುತ್ತಿದ್ದೇನೆ. ನಾನು ಆತ್ಮ ತೃಪ್ತಿಯಿಂದ ನಿವೃತ್ತಿಯಾಗುತ್ತಿದ್ದೇನೆ ಎಂದು ಮೈಸೂರಿನಲ್ಲಿ ಸಂಸದ ವಿ. ಶ್ರೀನಿವಾಸ ಪ್ರಸಾದ್ ಘೋಷಿಸಿದ್ದಾರೆ.
ನಾಲ್ಕು ವರ್ಷದ ಹಿಂದೆಯೇ ನಾನು ನಿವೃತ್ತಿಯನ್ನು ಬಯಸಿದ್ದೆ. ಆದರೆ, ರಾಜಕೀಯ ಬೆಳವಣಿಗೆ ಬೇರೆಯಾದ ಕಾರಣ ಸ್ಪರ್ಧೆ ಮಾಡಿದ್ದೆ. ಇನ್ನು ಮುಂದೆ ನಾನು ಚುನಾವಣೆಗಳಿಗೆ ಸ್ಪರ್ಧಿಸುವುದಿಲ್ಲ. ಈ ಮಾತಿನಿಂದ ನಾನು ಹಿಂದೆ ಸರಿಯುವುದೂ ಇಲ್ಲ ಎಂದು ಶ್ರೀನಿವಾಸ ಪ್ರಸಾದ್ ತಿಳಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯದಲ್ಲಿ ಸಚಿವರಾಗಿ ಶ್ರೀನಿವಾಸ ಪ್ರಸಾದ್ ಕಾರ್ಯನಿರ್ವಹಿಸಿದ್ದಾರೆ. ನಂಜನಗೂಡು ವಿಧಾನಸಭೆ ಉಪ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದರು. ಈಗ ಚುನಾವಣಾ ರಾಜಕಾರಣದಿಂದ ನಿವೃತ್ತರಾಗುವುದಾಗಿ ಹೇಳಿದ್ದಾರೆ.