
ಬೆಂಗಳೂರು: ಇಂಧನ ಇಲಾಖೆಯ ಸಾಫ್ಟ್ವೇರ್ ಉನ್ನತೀಕರಣ ಪ್ರಕ್ರಿಯೆ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಿದ್ದ ವಿದ್ಯುತ್ ಸರಬರಾಜು ಕಂಪನಿಗಳ ಆನ್ಲೈನ್ ಬಿಲ್ ಪಾವತಿ ಸೇರಿ ವಿವಿಧ ಸೇವೆ ಪುನಾರಂಭಗೊಂಡಿವೆ.
ಮಾರ್ಚ್ 30ರ ವೇಳೆಗೆ ಎಲ್ಲಾ ಆನ್ಲೈನ್ ಸೇವೆಗಳು ಯಥಾಸ್ಥಿತಿಗೆ ಬರಲಿವೆ ಎಂದು ಇಂಧನ ಇಲಾಖೆ ಮಾಹಿತಿ ನೀಡಿದೆ. ಸಾಫ್ಟ್ವೇರ್ ಉನ್ನತೀಕರಣ ಸಂದರ್ಭದಲ್ಲಿ ಬಿಲ್ ವಿಳಂಬ ಪಾವತಿಗೆ ದಂಡ, ಬಡ್ಡಿ ವಿಧಿಸುವುದಿಲ್ಲ ಮತ್ತು ಸಂಪರ್ಕ ಕಡಿತಗೊಳಿಸುವುದಿಲ್ಲ ಎಂದು ಹೇಳಲಾಗಿದೆ.
ಮಾರ್ಚ್ 10 ರಿಂದ 19 ರವರೆಗೆ ಉನ್ನತೀಕರಣ ಪ್ರಕ್ರಿಯೆ ನಡೆದ ಸಂದರ್ಭದಲ್ಲಿ ಆನ್ಲೈನ್ ಪಾವತಿ ವ್ಯವಸ್ಥೆ ಹಾಗೂ ಇಲಾಖೆಯ ವಿವಿಧ ಸೇವೆಗಳು ಸಂಪೂರ್ಣ ಸ್ಥಗಿತಗೊಂಡಿದ್ದ ಕಾರಣ ಗ್ರಾಹಕರು ಭಾರಿ ಸಂಖ್ಯೆಯಲ್ಲಿ ಎಸ್ಕಾಂ ಕೌಂಟರ್ ಗಳಿಗೆ ದೌಡಾಯಿಸಿದ್ದರು. ಇದರಿಂದಾಗಿ ಸರ್ವರ್ ಸಮಸ್ಯೆ ಎದುರಾಗಿತ್ತು. ಈಗ ಎಲ್ಲಾ ಸಮಸ್ಯೆ ಸರಿಪಡಿಸಿದ್ದು, ಕೆಲವೇ ದಿನಗಳಲ್ಲಿ ಎಲ್ಲವೂ ಸಹಜ ಸ್ಥಿತಿಗೆ ಮರಳಲಿದೆ ಎಂದು ಹೇಳಲಾಗಿದೆ.