ವಿದೇಶಿ ಪ್ರಯಾಣದ ಆಲೋಚನೆಯಲ್ಲಿದ್ದವರಿಗೆ ಡಿಜಿಸಿಎ ನಿರಾಶೆಗೊಳಿಸಿದೆ. ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ಅಂತರರಾಷ್ಟ್ರೀಯ ವಿಮಾನಗಳ ನಿಷೇಧವನ್ನು ಜುಲೈ 31 ರ ವರೆಗೆ ವಿಸ್ತರಿಸಿದೆ. ಅಂತರರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ ವಿಮಾನಗಳ ಹಾರಾಟ ನಿಷೇಧವು ಜುಲೈ 31 ರವರೆಗೆ ಜಾರಿಯಲ್ಲಿರುತ್ತದೆ ಎಂದು ಡಿಜಿಸಿಎ ತಿಳಿಸಿದೆ.
ಡಿಜಿಸಿಎ ಅನುಮತಿ ನೀಡಿರುವ ಅಂತರರಾಷ್ಟ್ರೀಯ ಸರಕು ವಿಮಾನಗಳಿಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ 2020 ರ ಮಾರ್ಚ್‌ನಲ್ಲಿ ಮೊದಲ ಬಾರಿಗೆ ಅಂತರರಾಷ್ಟ್ರೀಯ ವಿಮಾನ ಹಾರಾಟವನ್ನು ನಿಷೇಧಿಸಲಾಗಿತ್ತು. ಮೇ 2020 ರಲ್ಲಿ ದೇಶೀಯ ವಿಮಾನಗಳು ಪುನರಾರಂಭಗೊಂಡವು. ಆದರೆ ಕೋವಿಡ್ ಪ್ರಕರಣಗಳು ವಿಶ್ವದ ವಿವಿಧ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿರುವುದರಿಂದ ಅಂತರರಾಷ್ಟ್ರೀಯ ಪ್ರಯಾಣವನ್ನು ನಿರ್ಬಂಧಿಸಲಾಗಿದೆ.
ಡಿಜಿಸಿಎ, ಮಾರ್ಚ್ 2020 ರಿಂದ ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ನಿಷೇಧವನ್ನು ಹಲವಾರು ಬಾರಿ ವಿಸ್ತರಿಸಿದೆ. ಕಳೆದ ವರ್ಷ, ಕೋವಿಡ್ ಕಾರಣದಿಂದಾಗಿ, ವಿಶ್ವದ ವಿವಿಧ ದೇಶಗಳಲ್ಲಿ ಸಿಕ್ಕಿಬಿದ್ದ ಭಾರತೀಯರನ್ನು ಮರಳಿ ತರಲು ಭಾರತ ಸರ್ಕಾರ ʼವಂದೇ ಭಾರತ್ ಮಿಷನ್ʼ ಪ್ರಾರಂಭಿಸಿತು.