
ಈ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 1962 ರ ಸಂಘರ್ಷದಲ್ಲಿ ಹೋರಾಡಿದ ಬ್ರಿಗೇಡಿಯರ್ (ನಿವೃತ್ತ) ಆರ್.ವಿ. ಜಟಾರ್ ಅವರನ್ನು ಗೌರವಯುತವಾಗಿ ಯುದ್ಧ ಸ್ಮಾರಕಕ್ಕೆ ಕರೆದೊಯ್ದಿದ್ದಾರೆ. ಈ ವೇಳೆ ಸ್ವತಃ ರಾಜನಾಥ್ ಸಿಂಗ್ ಅವರು, ಬ್ರಿಗ್ ಜಟಾರ್ ಅವರ ಗಾಲಿಕುರ್ಚಿಯನ್ನು ತಳ್ಳುತ್ತಾ ಸಾಗಿರುವುದರ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು ರಕ್ಷಣಾ ಸಚಿವಾಲಯದ ಪಿಆರ್‌ಒ ಉಧಂಪುರ, ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದೆ. 1962 ರ ಚೀನಾ-ಭಾರತ ಸಂಘರ್ಷದಲ್ಲಿ ಕೆಚ್ಚೆದೆಯಿಂದ ಹೋರಾಡಿದ 13 ಕುಮಾವೂನ್‌ನ ಬ್ರಿಗೇಡಿಯರ್ (ನಿವೃತ್ತ) ಆರ್.ವಿ. ಜಟಾರ್ ಅವರು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಿಂದ ಬೆಂಗಾವಲು ಪಡೆಯುತ್ತಿದ್ದಾರೆ ಎಂದು ಟ್ವೀಟ್ ಮಾಡಲಾಗಿದೆ.
ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಬ್ಬಾ ಇದೆಂಥ ಅದ್ಭುತ ದೃಶ್ಯ…. ಒಬ್ಬ ಯೋಧನನ್ನು ರಕ್ಷಣಾ ಮಂತ್ರಿಯವರು ಬೆಂಗಾವಲು ಮಾಡುತ್ತಿದ್ದಾರೆ. ಅವರಿಗೆ ತನ್ನ ಸೆಲ್ಯೂಟ್ ಎಂದು ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
ಲಡಾಖ್‌ನ ದುರ್ಗಮ ಬೆಟ್ಟಗಳ ನಡುವೆ ಇರುವ ರೆಜಾಂಗ್ ಲಾ ತಲುಪಿದ ನಂತರ, 1962 ರ ಯುದ್ಧದಲ್ಲಿ ತಮ್ಮ ಅತ್ಯುನ್ನತ ತ್ಯಾಗ ಮಾಡಿದ 114 ಭಾರತೀಯ ಸೈನಿಕರಿಗೆ ಗೌರವವನ್ನು ಸಲ್ಲಿಸಲಾಗಿದೆ. ರೆಜಾಂಗ್ ಲಾ ಕದನವು ಜಗತ್ತಿನಲ್ಲೇ 10 ಶ್ರೇಷ್ಠ ಮತ್ತು ಅತ್ಯಂತ ಸವಾಲಿನ ಮಿಲಿಟರಿ ಸಂಘರ್ಷಗಳಲ್ಲಿ ಒಂದಾಗಿದೆ ಎಂದು ಸ್ಮಾರಕ ಉದ್ಘಾಟನೆಯ ನಂತರ ರಕ್ಷಣಾ ಸಚಿವರು ಹೇಳಿದ್ದಾರೆ.