ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ರಾಸಲೀಲೆ ವಿಡಿಯೋ ಬಹಿರಂಗವಾಗಿದ್ದು, ಅಧಿವೇಶನ ಆರಂಭವಾಗುವ ಹೊತ್ತಲ್ಲೇ ಈ ಬೆಳವಣಿಗೆ ನಡೆದಿರುವುದು ಬಿಜೆಪಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಕಾರಣರಾಗಿದ್ದ ಮತ್ತು ಪ್ರಭಾವಿ ಸಚಿವರಾಗಿರುವ ಅಲ್ಲದೆ, ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಉತ್ತಮ ಸಂಪರ್ಕ ಹೊಂದಿರುವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ವಿಡಿಯೋ ರಾಜ್ಯ ರಾಜಕೀಯದಲ್ಲಿ ಹಲ್ಚಲ್ ಸೃಷ್ಟಿಸಿದೆ.
ಈ ಹಿಂದೆಯೂ ಹಲವು ಸಚಿವರ ಬಗ್ಗೆ ಸಿಡಿ ಆರೋಪ ಕೇಳಿಬಂದಾಗ ರಾಜೀನಾಮೆ ನೀಡಿದ್ದರು. ಯಡಿಯೂರಪ್ಪ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಆಹಾರ ಖಾತೆ ಸಚಿವರಾಗಿದ್ದ ಹರತಾಳು ಹಾಲಪ್ಪ ಅವರ ವಿರುದ್ಧ ಇಂತಹುದೇ ಆರೋಪ ಕೇಳಿಬಂದಿತ್ತು. ಅವರು ರಾಜೀನಾಮೆ ನೀಡಿದ್ದರು. ಅಲ್ಲದೇ ಅವರು ಆರೋಪ ಮುಕ್ತರಾಗಿದ್ದಾರೆ.
ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭದಲ್ಲಿ ಸಚಿವರಾಗಿದ್ದ ಹೆಚ್.ವೈ. ಮೇಟಿ ಅವರ ರಾಸಲೀಲೆ ವಿಡಿಯೋ ಕೂಡ ಬಹಿರಂಗವಾಗಿ ಅವರು ರಾಜೀನಾಮೆ ನೀಡಿದ್ದರು. ಇನ್ನು ಹಲವು ಜನಪ್ರತಿನಿಧಿಗಳ ವಿಡಿಯೋ ಮತ್ತು ಮೊಬೈಲ್ನಲ್ಲಿ ಅಶ್ಲೀಲ ವಿಡಿಯೋ ನೋಡಿದ ಪ್ರಕರಣಗಳು ನಡೆದಿದ್ದವು.
ಸದ್ಯದ ಪರಿಸ್ಥಿತಿಯಲ್ಲಿ ಸಚಿವ ರಮೇಶ್ ಜಾರಕಿಹೊಳಿ ಅವರ ವಿಡಿಯೋ ಬಹಿರಂಗವಾಗಿದ್ದು, ಬಿಜೆಪಿ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ವಿರೋಧಪಕ್ಷಗಳಿಗೆ ಹೊಸ ಪ್ರಬಲ ಅಸ್ತ್ರ ಸಿಕ್ಕಂತಾಗಿದೆ. ಸಿಎಂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರಮೇಶ್ ಜಾರಕಿಹೊಳಿ ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.