ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಗೆ ಭೇಟಿ ನೀಡಿ ಆರ್.ಆರ್. ನಗರ ಶಾಸಕ ಮುನಿರತ್ನ ಆರೋಗ್ಯ ವಿಚಾರಿಸಿದ ಅವರು ನಂತರ ಮಾತನಾಡಿ, ಮೊಟ್ಟೆ ದಾಳಿ ಸಣ್ಣ ಘಟನೆಯಲ್ಲ, ರಾಜ್ಯ ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಘಟನೆ ನಡೆದಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಿಜಯೇಂದ್ರ, ಈ ಸರ್ಕಾರ ಬಂದಾಗಿನಿಂದ ಶಾಸಕ ಮುನಿರತ್ನ ಮೇಲೆ ಒತ್ತಡ ಹಾಕಲಾಗುತ್ತಿದೆ. ಹೇಗಾದರೂ ಮಾಡಿ ರಾಜೀನಾಮೆ ನೀಡುವಂತೆ ಒತ್ತಡ ಹಾಕುತ್ತಿದ್ದಾರೆ. ವಿರೋಧ ಪಕ್ಷದವರ ಮೇಲೆ ಪೊಲೀಸರನ್ನು ಬಳಸಿ ಒತ್ತಡ ಹೇರುತ್ತಿದ್ದಾರೆ. ಶಾಸಕ ಹರೀಶ್ ಪೂಂಜ ಅವರ ಮೇಲೆ ಪ್ರಕರಣ ದಾಖಲು ಮಾಡಿದರು. ಸದನದ ಹೊರಗೆ ಸಿ.ಟಿ. ರವಿ ಅವರನ್ನು ನಡೆಸಿಕೊಂಡ ರೀತಿ ನೋಡಿದ್ದೀರಿ. ಈ ರೀತಿ ಒತ್ತಡ ಹಾಕಿ ದೌರ್ಜನ್ಯ ನಡೆಸಲು ನಾವು ಬಿಡುವುದಿಲ್ಲ. ಇದೊಂದು ಅಕ್ಷಮ್ಯ ಅಪರಾಧ ಎಂದು ಹೇಳಿದ್ದಾರೆ.
ಯಾರೇ ಬಂದು ಚೂರಿ ಹಾಕಿದರು ಗೊತ್ತಾಗಬಾರದು ಅಂತ ಗನ್ ಮ್ಯಾನ್ ತೆಗೆದಿದ್ದಾರೆ. ಮುನಿರತ್ನಗೆ ಕೊಲೆ ಬೆದರಿಕೆ ಇದೆ. ಮುನಿರತ್ನ ಬಲಾಢ್ಯರು ಎಂದು ಅವರನ್ನು ಕುಗ್ಗಿಸಲು ಯತ್ನ ನಡೆದಿದೆ. ಪಕ್ಷ ಮುನಿರತ್ನ ಅವರೊಂದಿಗೆ ಸದಾ ಇರುತ್ತದೆ ಎಂದು ವಿಜಯೇಂದ್ರ ಹೇಳಿದ್ದಾರೆ.