ದಾವಣಗೆರೆ: ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರು ರಾಜೀನಾಮೆ ನೀಡಬೇಕಾಗಿತ್ತು. ಚುನಾವಣೆ ಸೋಲಿನ ಹೊಣೆ ಹೊತ್ತು ಅವರು ರಾಜೀನಾಮೆ ನೀಡಬೇಕಾಗಿತ್ತು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಅವರೆಲ್ಲ ಭ್ರಮಾಲೋಕದಲ್ಲಿದ್ದಾರೆ. ಅವರದು ಸರ್ವಾಧಿಕಾರಿ ಧೋರಣೆ ಎಂದು ಬಿಜೆಪಿ ಮಾಜಿ ಸಚಿವ ಸಿ.ಟಿ. ರವಿ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ಕೇವಲ ಬಿಜೆಪಿ ಕಚೇರಿಯಲ್ಲಿ ಕುಳಿತುಕೊಂಡು ಆಡಳಿತ ನಡೆಸುವುದಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗ ಆರು ಸಚಿವ ಸ್ಥಾನಗಳನ್ನು ಹಾಗೆಯೇ ಉಳಿಸಿಕೊಂಡಿದ್ದರು. ಕಾರ್ಯಕರ್ತರಿಗೆ ಸರಿಯಾಗಿ ನಿಗಮ ಮಂಡಳಿಯಲ್ಲಿ ನೇಮಕ ಮಾಡಲಿಲ್ಲ. ಕಾರ್ಯಕರ್ತರು ಇರುವುದು ಬಾವುಟ ಹಿಡಿದು ಜೈಕಾರ ಕೂಗಲು ಮಾತ್ರವೇ ಎಂದು ಪ್ರಶ್ನಿಸಿದ್ದಾರೆ.
ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಿದ್ದರಿಂದ ನಾನು ಮಾತನಾಡುತ್ತಿದ್ದೇನೆ. ಕಾಂಗ್ರೆಸ್ ನವರು ಹೇಳಿದಂತೆ ಐದು ಗ್ಯಾರಂಟಿ ಯೋಜನೆ ಜಾರಿಗೆ ತರಲಿ. ಅವರ ಮನೆಯಿಂದ ತಂದುಕೊಡಲ್ಲ. ತೆರಿಗೆ ದುಡ್ಡಿನಲ್ಲೇ ಕೊಡುತ್ತಾರೆ. ಕೇಂದ್ರ ಸರ್ಕಾರ ಕೂಡ ಎಲ್‌ಪಿಜಿ ಸಿಲಿಂಡರ್ ದರವನ್ನು 200 ರೂಪಾಯಿ ಕಡಿತಗೊಳಿಸಿದೆ. ರಕ್ಷಾಬಂಧನ ಹಬ್ಬಕ್ಕೆ ಮಹಿಳೆಯರಿಗೆ ಪ್ರಧಾನಿ ಮೋದಿ ಉಡುಗೊರೆ ನೀಡಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.