ಬೆಂಗಳೂರು: ವಿಧಾನಸೌಧದ ಮುಖ್ಯಮಂತ್ರಿಯವರ ಕಚೇರಿಯಿಂದ ಹೊರ ಬಂದ ಮಿತ್ರಮಂಡಳಿ ಸಚಿವರು ರಾಜೀನಾಮೆ ನೀಡಲು ಹೋಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಿಎಂ ಬೆಂಬಲಿಸಿ ಸರ್ಕಾರ ರಚನೆಗೆ ಕಾರಣರಾದ ಸಚಿವರು ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿತ್ತು. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ವಾಪಸಾದ ಸಚಿವರು ರಾಜೀನಾಮೆ ಸುದ್ದಿಯನ್ನು ಅಲ್ಲಗಳೆದಿದ್ದಾರೆ.
ನಾವು ರಾಜೀನಾಮೆ ನೀಡಲು ಚಿಂತನೆ ನಡೆಸಿಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ವಲಸಿಗ ಸಚಿವರ ರಾಜೀನಾಮೆ ಸುದ್ದಿ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.
ರಾಜೀನಾಮೆ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿಯವರನ್ನು ಭೇಟಿಯಾಗಿರಲಿಲ್ಲ ಎಂದು ಸಚಿವ ಎಂಟಿಬಿ ನಾಗರಾಜ್ ತಿಳಿಸಿದ್ದು, ವರ್ಗಾವಣೆ ಮತ್ತು ಕ್ಷೇತ್ರದ ಕೆಲಸಗಳಿಗೆ ಸಂಬಂಧಿಸಿದಂತೆ ಸಿಎಂ ಜೊತೆ ಚರ್ಚೆ ನಡೆಸಲು ಬಂದಿದ್ದೆವು. ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದ್ದು, ಹೈಕಮಾಂಡ್ ಸೂಚಿಸಿದರೆ ನಾವು ಕೂಡ ರಾಜೀನಾಮೆ ನೀಡುತ್ತೇವೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪನವರು ನೀಡಿದ ಹೇಳಿಕೆಯ ಕುರಿತಂತೆ ಅವರ ಬಳಿ ಕೇಳಿದ್ದು, ಜುಲೈ 25 ರಂದು ಹೈಕಮಾಂಡ್ ಆದೇಶವನ್ನು ಪಾಲಿಸುವುದಾಗಿ ಅವರು ತಿಳಿಸಿದ್ದಾರೆ. ಯಡಿಯೂರಪ್ಪ ಇರುವವರೆಗೂ ಅವರೊಂದಿಗೆ ಇರುತ್ತೇವೆ. ಹೈಕಮಾಂಡ್ ಕೊಡುವ ನಿರ್ದೇಶನವನ್ನು ಪಾಲಿಸುತ್ತೇವೆ. ನಮಗೆ ಯಾವುದೇ ರೀತಿಯ ಆತಂಕ ಇಲ್ಲ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.