ಬೆಂಗಳೂರು: ಉದ್ಯೋಗದಾತನಿಗೆ ಉದ್ಯೋಗಿ ಸಲ್ಲಿಸಿದ ರಾಜೀನಾಮೆ ಪತ್ರವನ್ನು ಆತನ ಪರವಾಗಿ ಪತ್ನಿ ಅಥವಾ ಮಕ್ಕಳು ವಾಪಸ್ ಪಡೆಯಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಪತ್ನಿಯ ಮನವಿ ಮೇರೆಗೆ ತನ್ನ ರಾಜೀನಾಮೆ ಪತ್ರ ಅಂಗೀಕರಿಸದಿರಲು ಉದ್ಯೋಗದಾತ ಸಂಸ್ಥೆ ಕೈಗೊಂಡಿದ್ದ ನಿರ್ಣಯ ರದ್ದುಪಡಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ವಜಗೊಳಿಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರ್ಲೆ ನೇತೃತ್ವದ ವಿಭಾಗಿಯಪೀಠ ಈ ಆದೇಶ ನೀಡಿದೆ.
ಮಂಡ್ಯ ಜಿಲ್ಲೆ ಮದ್ದೂರಿನ ಡಿ. ವೆಂಕಟೇಶ್ ಅವರು ಸಲ್ಲಿಸಿದ ಮೇಲ್ಮನವಿಯನ್ನು ವಜಾಗೊಳಿಸಿದ ವಿಭಾಗಿಯ ಪೀಠ, ಉದ್ಯೋಗಿಯೇ ರಾಜೀನಾಮೆ ಪತ್ರ ಹಿಂಪಡೆಯಬೇಕು. ಈ ಕುರಿತಾದ ಮನವಿ ಉದ್ಯೋಗಿಯಿಂದಲೇ ಸಲ್ಲಿಕೆಯಾಗಬೇಕು. ಈ ಪ್ರಕರಣದಲ್ಲಿ ನೌಕರನ ರಾಜೀನಾಮೆ ಹಿಂಪಡೆಯಲು ಆತನ ಪತ್ನಿ ಕೋರಿದ್ದಾರೆ. ಉದ್ಯೋಗಿಯ ಪತ್ನಿಗೆ ಅಂತಹ ಹಕ್ಕು ಹೊಂದಿರುವುದನ್ನು ಯಾವುದೇ ನಿಯಮ ನ್ಯಾಯಾಲಯದ ಗಮನಕ್ಕೆ ತಂದಿಲ್ಲ. ಇಂತಹ ಪರಿಕಲ್ಪನೆ ಸೇವಾ ಕಾನೂನಿಗೆ ವಿರುದ್ಧವಾಗಿದೆ ಎಂದು ಹೇಳಿದ ವಿಭಾಗಿಯಪೀಠವು ಏಕಸದಸ್ಯ ಪೀಠದ ತೀರ್ಪನ್ನು ಪುರಸ್ಕರಿಸಿದೆ.
ನೌಕರನ್ನೇ ಸ್ವತಃ ಉದ್ಯೋಗದಲ್ಲಿರಲು ಸಿದ್ಧವಿಲ್ಲದೆ ರಾಜೀನಾಮೆ ಕೊಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ಆತನ ಪತ್ನಿ ಅಥವಾ ಮಕ್ಕಳು ಸೇವೆಯಲ್ಲಿ ಮುಂದುವರೆಯಲು ಹೇಗೆ ಕಾರಣರಾಗುತ್ತಾರೆ ಎಂದು ಪ್ರಶ್ನಿಸಿದ ನ್ಯಾಯಪೀಠ, ರಾಜೀನಾಮೆ ಉದ್ಯೋಗಿಯ ಸ್ವಯಂ ಪ್ರೇರಿತ ನಿರ್ಧಾರವಾಗಿದೆ. ರಾಜೀನಾಮೆ ಸಲ್ಲಿಸಿ ಆತ ಸೇವೆ ತೊರೆಯಲು ಪ್ರಯತ್ನಿಸುತ್ತಾನೆ. ಉದ್ಯೋಗದಾತ ಸಂಸ್ಥೆ ಅಂಗೀಕರೀಸುವ ಮೊದಲೇ ರಾಜಿನಾಮೆಯನ್ನು ಸ್ವತಃ ಉದ್ಯೋಗಿಯೇ ಹಿಂಪಡೆಯಬೇಕು. ಅದನ್ನು ಹೊರತುಪಡಿಸಿ ಪತ್ನಿ ಮತ್ತು ಮಕ್ಕಳು ಉದ್ಯೋಗಿಯ ಪರವಾಗಿ ರಾಜೀನಾಮೆ ಹಿಂಪಡೆಯಲು ಅವಕಾಶವಿಲ್ಲವೆಂದು ನ್ಯಾಯಪೀಠ ಹೇಳಿದೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಉದ್ಯೋಗಿಯಾಗಿದ್ದ ಮದ್ದೂರಿನ ಡಿ. ವೆಂಕಟೇಶ್ 2021ರ ನವೆಂಬರ್ 11ರಂದು ರಾಜೀನಾಮೆ ನೀಡಿದ್ದರು. ಸಂಘ ಅವರ ರಾಜೀನಾಮೆ ಅಂಗೀಕರಿಸಲು ನಿರ್ಣಯ ಕೈಗೊಂಡಿತ್ತು. ನಂತರ ಅವರ ಪತ್ನಿ ರಾಜೀನಾಮೆ ಪತ್ರ ಹಿಂಪಡೆಯಲು ಅನುಮತಿ ಕೋರಿ ಉದ್ಯೋಗ ಸಂಸ್ಥೆಗೆ ಪತ್ರ ಸಲ್ಲಿಸಿದರು. ಅದನ್ನು ಆಧರಿಸಿ ರಾಜೀನಾಮೆ ಅಂಗೀಕರಿಸದಿರಲು ಸಂಘ ನಿರ್ಣಯ ಕೈಗೊಂಡಿತ್ತು. ಅದನ್ನು ಪ್ರಶ್ನಿಸಿ ಸಂಘದ ಮತ್ತೊಬ್ಬ ಉದ್ಯೋಗಿ ಹೈಕೋರ್ಟ್ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಏಕಸದಸ್ಯ ಪೀಠ ವೆಂಕಟೇಶ್ ಅವರ ರಾಜೀನಾಮೆ ಅಂಗೀಕರಿಸದಿರಲು ಸಂಘ ಕೈಗೊಂಡಿದ್ದ ನಿರ್ಣಯ ರದ್ದುಪಡಿಸಿ 2022ರ ಅಕ್ಟೋಬರ್ 13ರಂದು ಆದೇಶ ನೀಡಿದ್ದು, ಈ ಆದೇಶ ರದ್ದು ಕೋರಿ ವೆಂಕಟೇಶ್ ವಿಭಾಗೀಯ ಪೀಠದ ಮೊರೆ ಹೋಗಿದ್ದರು.