ಹೈಕಮಾಂಡ್ ಬಯಸಿದರೆ ರಾಜೀನಾಮೆ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೀಡಿದ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಅಂದ ಹಾಗೆ, ಸಿಎಂ ಇಂತಹದೊಂದು ಹೇಳಿಕೆ ನೀಡುತ್ತಲೇ ಆಡಳಿತ ಪಕ್ಷದಲ್ಲಿ ಮಾತ್ರವಲ್ಲ, ವಿರೋಧ ಪಕ್ಷದಲ್ಲಿ ಅವರ ಪರವಾಗಿ ಹೇಳಿಕೆಗಳು ಬಂದಿವೆ.
ಪದತ್ಯಾಗಕ್ಕೂ ಸಿದ್ಧ ಎಂದು ಒಂದೇ ಒಂದು ಹೇಳಿಕೆ ಮೂಲಕ ಸಿಎಂ ವಿರೋಧಿಗಳಿಗೆ ಸರಿಯಾದ ಟಾಂಗ್ ನೀಡಿದ್ದು, ಹೈಕಮಾಂಡ್ ಗೂ ಸ್ಪಷ್ಟವಾದ ಸಂದೇಶವನ್ನು ರವಾನಿಸಿದ್ದಾರೆ. ಸಿಎಂ ಇಂತಹದೊಂದು ಹೇಳಿಕೆ ನೀಡುತ್ತಲೇ ಅವರ ಬೆಂಬಲಕ್ಕೆ ಸಚಿವರು, ನಾಯಕರು ಶಾಸಕರ ದಂಡೇ ನಿಂತಿದೆ. ನೀವು ಒಪ್ಪಿದರೆ ದೆಹಲಿಗೆ ಹೋಗಿ ಮುಖ್ಯಮಂತ್ರಿ ಬದಲಾವಣೆ ಮಾಡದಂತೆ ವರಿಷ್ಠರ ಮೇಲೆ ಒತ್ತಡ ಹೇರುವುದಾಗಿ ಯಡಿಯೂರಪ್ಪ ಬೆಂಬಲಿಗರು ತಿಳಿಸಿದ್ದಾರೆ.
ಇನ್ನು ಕೇಂದ್ರ ನಾಯಕರು ಹಾಗೂ ರಾಜ್ಯಾಧ್ಯಕ್ಷರು, ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಪದೇಪದೇ ನಾಯಕತ್ವ ಬದಲಾವಣೆ ಬಗ್ಗೆ ಹೇಳಿಕೆ ನೀಡಿ ಕೆಣಕುತ್ತಿದ್ದ ವಿರೋಧಿ ಬಣ ಕೂಡ ಇಂದಿನ ಬೆಳವಣಿಗೆಯಿಂದ ನಲುಗಿದೆ. ತಮ್ಮ ನಾಯಕತ್ವ ಬದಲಾವಣೆ ಕುರಿತಾಗಿ ಪದೇ ಪದೇ ಇಂತಹ ಹೇಳಿಕೆ ಬರುತ್ತಿರುವುದನ್ನು ಗಮನಿಸಿದ ಸಿಎಂ ಪುತ್ರ ವಿಜಯೇಂದ್ರ ಮೂಲಕ ವರಿಷ್ಠರೊಂದಿಗೆ ಚರ್ಚೆ ನಡೆಸಿದ್ದಾರೆ. ಅದಾದ ನಂತರದಲ್ಲಿಯೇ ಅವರಿಂದ ಇಂತಹದೊಂದು ಹೇಳಿಕೆ ಹೊರಬಿದ್ದಿರುವುದು ವಿಶೇಷವಾಗಿದೆ.
ಈ ಮೂಲಕ ವಿರೋಧಿ ಬಣಕ್ಕೆ ಸಿಎಂ ನೇರವಾಗಿಯೇ ತಿರುಗೇಟು ನೀಡಿದ್ದಾರೆ. ಸಿಎಂ ರಾಜೀನಾಮೆ ಬಗ್ಗೆ ಪ್ರಸ್ತಾಪಿಸುತ್ತಲೇ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಅವರ ಬೆಂಬಲಕ್ಕೆ ಸಚಿವರು, ಶಾಸಕರು, ನಾಯಕರು ನಿಂತಿದ್ದಾರೆ. ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿ ಇದ್ದು ಸಂದರ್ಭದಲ್ಲಿ ನಾಯಕತ್ವ, ಸಿಎಂ ಬದಲಾವಣೆ ಅಗತ್ಯವಿಲ್ಲ ಎಂಬ ಅಭಿಪ್ರಾಯಗಳು ಕೇಳಿಬಂದಿವೆ. ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಇಂತಹ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತ್ರ ಯಡಿಯೂರಪ್ಪ ಅವರ ಹಿಂದಿನ ಹೇಳಿಕೆಯ ಹಿಂದಿನ ಕಾರ್ಯತಂತ್ರದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಯಡಿಯೂರಪ್ಪ ಬಿಜೆಪಿ ಮತ್ತು ರಾಜ್ಯ ರಾಜಕೀಯದಲ್ಲಿ ಪ್ರಬಲ ನಾಯಕರಾಗಿದ್ದಾರೆ. ರಾಜೀನಾಮೆ ಕುರಿತಾಗಿ ಅವರ ನೀಡಿದ ಅವರ ಹೇಳಿಕೆಯ ಹಿಂದೆ ವಿಭಿನ್ನ ತಂತ್ರವಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಹೀಗೆ ಸಿಎಂ ನೀಡಿದ ಹೇಳಿಕೆ ಸಂಚಲನ ಮೂಡಿಸಿದೆ. ತಮ್ಮ ಒಂದೇ ಒಂದು ಹೇಳಿಕೆಯ ಮೂಲಕ ಸಿಎಂ ಎಲ್ಲರಿಗೂ ಉತ್ತರ ನೀಡಿ ರಾಜಕೀಯ ಚಾಣಾಕ್ಷತೆ ತೋರಿದ್ದಾರೆ ಎನ್ನಲಾಗಿದೆ.