ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಬಿಐ ತನಿಖೆ ಆರಂಭಿಸಿದ ಬೆನ್ನಲ್ಲೇ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ bi. ನಾಗೇಂದ್ರ ಅವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಸಿಎಂ ಸೂಚನೆ ಹಿನ್ನೆಲೆಯಲ್ಲಿ ಇಂದು ಸಚಿವ ನಾಗೇಂದ್ರ ಪದಾತ್ಯಾಗ ಮಾಡುವ ಸಾಧ್ಯತೆ ಇದೆ. ಅಕ್ರಮ ಹಣ ವರ್ಗಾವಣೆ ಉರುಳಲ್ಲಿ ಸಿಲುಕಿಕೊಂಡಿರುವ ನಾಗೇಂದ್ರ ಗುರುವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದ್ದು, ಅವರು ರಾಜೀನಾಮೆ ನೀಡಿದಲ್ಲಿ ಸಿದ್ದರಾಮಯ್ಯ ಸರ್ಕಾರದ ಮೊದಲ ವಿಕೆಟ್ ಪತನವಾಗಲಿದೆ.
ಬುಧವಾರ ತಡರಾತ್ರಿ ಹಿರಿಯ ಸಚಿವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಿದ್ದು, ಈ ಸಭೆಗೆ ನಾಗೇಂದ್ರ ಅವರನ್ನು ಕರೆಸಿಕೊಂಡು ಮಾತನಾಡಿ ರಾಜೀನಾಮೆ ನೀಡುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ಅವರ ಇಬ್ಬರು ಆಪ್ತರು ಸೇರಿ ಮೂವರನ್ನು ಎಸ್ಐಟಿ ಬಂಧಿಸಿದೆ. ನೆಕ್ಕುಂಟಿ ನಾಗರಾಜ್, ನಾಗೇಶ್ವರರಾವ್, ಹೈದರಾಬಾದ್ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸತ್ಯನಾರಾಯಣ ಅವರನ್ನು ಬಂಧಿಸಲಾಗಿದೆ.